ಚಿಕ್ಕಮಗಳೂರು:ಯಾವುದೇ ಭಾಷಿಗರು ತಮ್ಮ ಮಾತೃಭಾಷೆಯನ್ನು ಮರೆತರೆ ಅವರು ಆ ಸಮುದಾಯದ ಸಂಸ್ಕೃತಿಯನ್ನು ಕಳೆದುಕೊಂಡು ಅನಾಥರಾಗುತ್ತಾರೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಎಚ್ಚರಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಮಾತೃಭಾಷಾ ದಿನ ಹಾಗೂ ಕನ್ನಡ ಅನುಷ್ಠಾನ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲಾ ಭಾಷೆಗಳಿಗೂ ಅದರದೇ ಆದ ಸಂಸ್ಕೃತಿ ಇರುತ್ತದೆ ಹಾಗಾಗಿ ಭಾಷೆಗಳು ನಾಶವಾದರೆ ಅದರ ಸಂಸ್ಕೃತಿಯೂ ನಾಶವಾಗುತ್ತದೆ ಎಂದ ಅವರು ಎಲ್ಲರೂ ಇದನ್ನು ಅರ್ಥಮಾಡಿಕೊಳ್ಳಬೇಕು, ಎಲ್ಲಾ ಭಾಷೆಗಳನ್ನೂ ಗೌರವಿಸಬೇಕು ಆದರೆ ತಮ್ಮ ಮಾತೃಭಾಷೆಯನ್ನು ಪ್ರೀತಿಸಬೇಕು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜೆಸಿಂತಾ ಅನಿಲ್ ಕುಮಾರ್ ಮಾತನಾಡಿ ನಾಡಿನಲ್ಲಿ ಕನ್ನಡ ಭಾಷೆ ಉಳಿಯಬೇಕಾದರೆ ಕನ್ನಡಿಗರು ತಮ್ಮ ಒಣ ಪ್ರತಿಷ್ಠೆಯನ್ನು ಬಿಟ್ಟು ಕನ್ನಡ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಬೇಕು ಎಂದರು.
ಮಾತೃಭಾಷೆ ಮಹತ್ವ ಮತ್ತು ಅನುಷ್ಠಾನ ವಿಷಯ ಕುರಿತು ಉಪನ್ಯಾಸ ನೀಡಿದ ಸಾಹಿತಿ ಬೆಳವಾಡಿ ಮಂಜುನಾಥ್ ದೇಶದಲ್ಲಿಂದು ಪ್ರಾದೇಶಿಕ ಭಾಷೆಗಳೆಲ್ಲಾ ಮರೆಯಾಗುತ್ತಿವೆ, ಹಿಂದಿ ಭಾಷೆ ಸಹ ನಶಿಸುವ ಹಂತದಲ್ಲಿದ್ದು, ಮುಂದೆ ಮಾತೃಭಾಷೆಯೇ ಮರೆತು ಹೋಗುವ ಅಪಾಯವಿದೆ ಹಾಗಾಗಿ ಇಂದು ಅದನ್ನು ಉಳಿಸುವ ಅನಿವಾರ್ಯತೆ ಇದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಅನಿವಾರ್ಯತೆ ಇಂದಿದೆ ಹಾಗಾಗಿ ಕನ್ನಡಿಗರಲ್ಲಿ ಮಾತೃಭಾಷೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಕವಿತಾ ಲಿಂಗರಾಜು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಲ್.ಶರಶ್ಚಂದ್ರ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಿ.ಎಂ.ಮಂಜುನಾಥ ಸ್ವಾಮಿ ಉಪಸ್ಥಿತರಿದ್ದರು.










