ಬೆಳಗಾವಿ: ಪಕ್ಷದಲ್ಲಿ ಯಾರು ಬೇಕಾದರೂ ಮುಖ್ಯ ಮಂತ್ರಿ ಆಕಾಂಕ್ಷಿ ಎನ್ನಬಹುದು. ಕಾಂಗ್ರೆಸ್ ವರಿಷ್ಠರು ಹಾಗೂ ಶಾಸಕರು ಪರಮೇಶ್ವರ ಸಿಎಂ ಆಗಲಿ ಅಂದರೆ ನಾನು ಮುಖ್ಯಮಂತ್ರಿ ಯಾಗಲು ಸಿದ್ಧ ಎಂದು ಕೆಪಿಸಿಸಿ ಅಧ್ಯಕ್ಷ ಡಾ|ಜಿ. ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾನೆಂದಿಗೂ ರಾಜಕೀಯ ಸನ್ಯಾಸಿ ಎಂದು ಹೇಳಿಕೆ ನೀಡಿಲ್ಲ.ನಾವು ಯಾರು ಬೇಕಾದವರೂ ಸಿಎಂ ಸ್ಥಾನದ ಆಕಾಂಕ್ಷಿ ಎಂದು ಹೇಳಿಕೊಂಡು ತಿರುಗಾಡಬಹುದು. ಆದರೆ, ಮುಂದಿನ ಸಿಎಂ ಯಾರು ಎಂಬುದು ಶಾಸಕಾಂಗ ಸಭೆಯಲ್ಲೇ ತೀರ್ಮಾನವಾಗುತ್ತದೆ’ ಎಂದರು.
ಇದೇ ವೇಳೆ ಕಾಂಗ್ರೆಸ್ ಅಧ್ಯಕ್ಷನಾಗಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದೇ ನನ್ನ ಮುಂದಿರುವ ಗುರಿ ಎಂದಿರುವ ಪರಮೇಶ್ವರ್, ಪಕ್ಷಕ್ಕೆ ಯಾರಾದರೂ ಯಜಮಾನರು ಬೇಕು. ನಮ್ಮ ಯಜಮಾನರು ಹೈಕಮಾಂಡ್. ಹೈಕಮಾಂಡ್ ಎಲ್ಲವನ್ನೂ ತೀರ್ಮಾನಿಸುತ್ತದೆ ಎಂದರು.