ಮೂಡಿಗೆರೆ :ರಾಜ್ಯದಲ್ಲಿ ಅಲ್ಲಲ್ಲಿ ದಿನದಿಂದ ದಿನಕ್ಕೆ ಸರ್ಕಾರಿ ಶಾಲೆಗಳು ಒಂದೊಂದಾಗಿ ಮುಚ್ಚುತ್ತಿರುವ ಈ ಸಂದರ್ಭದಲ್ಲಿ ಮಲೆನಾಡಿನ ಬೆಟ್ಟಗೆರೆ ಶ್ರೀಮತಿ ನಿಂಗಮ್ಮ ಬೊಮ್ಮಯ್ಯ ಸರ್ಕಾರಿ ಪ್ರೌಢಶಾಲೆ 25 ವರ್ಷಗಳು ಪೂರೈಸಿದ್ದು, ಇಂದು ಬೆಳ್ಳಿ ಹಬ್ಬದ ಕಾರ್ಯಕ್ರಮವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಅವರು ವಹಿಸಿದ್ದು, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಪುಟ್ಟರಂಗಶೆಟ್ಟಿ ಅವರು ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಶಾಸಕ ಬಿ.ಬಿ ನಿಂಗಯ್ಯ ಅವರು ಕನ್ನಡ ಭಾಷೆ ಉಳಿಯಬೇಕಾದರೆ ನಾವು ಮೊದಲು ಕನ್ನಡ ಭಾಷೆಯನ್ನು ಬಳಸಬೇಕು. ಇಂದಿನ ಕಾಲದಲ್ಲಿ ಇಂಗ್ಲಿಷ್ ಅನಿವಾರ್ಯ ಆದರೆ ಕನ್ನಡವನ್ನು ಕಡೆಗಣಿಸಬೇಡಿ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಕಾನೂನು ಸಚಿವ ಡಿ.ಬಿ ಚಂದೇಗೌಡ ಅವರು ನಾನು ಈ ಸ್ಥಳದಲ್ಲಿ ಮರಕೋತಿ ಹಾಗೂ ಗೋಲಿಯಾಡಿದ ದಿನಗಳು ನೆನಪಿಗೆ ಬರುತ್ತದೆ. ಇಂತಹ ಪುಟ್ಟ ಗ್ರಾಮದಲ್ಲಿ ಇಂತಹ ಅದ್ದೂರಿ ಕಾರ್ಯಕ್ರಮ ನಡೆಯುತ್ತದೆ ಎಂದು ನಾನು ಊಹಿಸಿರಲಿಲ್ಲ ಎಂದರು. ಈ ಸಂದರ್ಭದಲ್ಲಿ ಡಿ.ಬಿ ಚಂದ್ರೇಗೌಡರು ಹಾಗೂ ಜನತಾದಳದ ವರಿಷ್ಠರಾದ ಆನಂದ್ ಅವರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ, ವಿಧಾನ ಪರಿಷತ್ ಸದಸ್ಯರಾದ ಎಂ.ಕೆ ಪ್ರಾಣೇಶ್, ಮಾಜಿ ಸಚಿವರಾದ ಡಾ. ಮೋಟಮ್ಮ, ಜನತಾದಳದ ಜಿಲ್ಲಾಧ್ಯಕ್ಷರಾದ ರಂಜನ್ ಅಜಿತ್ ಕುಮಾರ್, ತಾಲೂಕು ಪಂಚಾಯಿತಿ ಅಧ್ಯಕ್ಷ ಕೆ.ಸಿ ರತನ್ ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ನಿಖಿಲ್ ಚಕ್ರವರ್ತಿ, ಪ್ರಭಾಕರ್, ಅಮಿತಾ ಮುತ್ತಪ್ಪ, ಬಣಕಲ್ ಶಾಮಣ್ಣ, ತಾಲೂಕು ಪಂಚಾಯಿತಿ ಸದಸ್ಯರಾದ ರಫೀಕ್ ಕಳಸ, ಸವಿತ ರಮೇಶ್, ಬೆಟ್ಟಗೆರೆ ಗ್ರಾಮ ಪಂಚಾಯಿತಿ ಸದಸ್ಯರಾದ ಮಮತ ರಾಜ್ ಮೋಹನ್, ತಹಸೀಲ್ದಾರ್ ಪದ್ಮನಾಭಶಾಸ್ರಿ, ಸೇರಿದಂತೆ ಸಾವಿರಾರು ಹಳೇ ವಿದ್ಯಾರ್ಥಿಗಳು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.










