ವಿದ್ಯಾವಂತರಿಂದಲೇ ಪರಿಸರ ಹಾಳಾಗುತ್ತಿರುವುದು ನೋವಿನ ಸಂಗತಿಯಾಗಿದೆ: ರಕ್ಷಿತ್…

329
firstsuddi

ಚಿಕ್ಕಮಗಳೂರು: ವಿದ್ಯಾವಂತರು ಪರಿಸರ ಹಾಳುಮಾಡುವುದನ್ನು ಕಡಿಮೆ ಮಾಡಿಕೊಂಡು ಬಂದರೆ ಮುಂದಿನ ದಿನಗಳಲ್ಲಿ ಎಲ್ಲಾರಲ್ಲೂ ಸ್ವಚ್ಚತೆಯ ಬಗ್ಗೆ ಅರಿವು ಮೂಡುತ್ತದೆ ಎಂಬ ಗುರಿಯಿಂದ ನಾವು ಈ ದಿನ ಸ್ಚಚ್ಚಗೊಳಿಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದು ನೋಬೆಲ್ ಪಿಯು ಕಾಲೇಜ್‍ನ ಪ್ರಾಂಶುಪಾಲರಾದ ರಕ್ಷಿತ್ ಹೇಳಿದರು.ಅವರು ಇಂದು ಮಕ್ಕಳ ದಿನಾಚರಣೆ ಅಂಗವಾಗಿ ಇಂದಾವರದ ಛತ್ರಿ ಮರದಮ್ಮನವರ ಆವರಣದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಚ ಚಿಕ್ಕಮಗಳೂರು ಶಿಬಿರದಲ್ಲಿ ಮಾತನಾಡುತ್ತ, ಇಂದಿನ ದಿನಗಳಲ್ಲಿ ವಿದ್ಯಾವಂತರಿಂದಲೇ ಪರಿಸರ ಹಾಳಾಗುತ್ತಿರುವುದು ನೋವಿನ ಸಂಗತಿಯಾಗಿದೆ, ಎಲ್ಲಿ ಬೇಕೆಂದರಲ್ಲಿ ಕಸ ಹಾಕುವ ಮೂಲಕ ನಮ್ಮ ಸುತ್ತಮುತ್ತಲ ಪರಿಸರವನ್ನು ಹಾಳು ಮಾಡುತ್ತಿದ್ದೇವೆ. ಸುಂದರ ಪರಿಸರದ ಸವಿಯನ್ನು ಆಸ್ವಾದಿಸಲು ಬರುವ ನಾವು ಹೋಗುವಾಗ ನಾವು ತಂದಂತಹ ತ್ಯಾಜ್ಯವನ್ನು ಪರಿಸರಕ್ಕೆ ಕೊಡುಗೆಯಾಗಿ ನೀಡಿ ಹಿಂದಿರುಗುತ್ತೇವೆ. ಇದರಿಂದ ಪರಿಸರ ತನ್ನ ಸತ್ವವನ್ನು ಕಳೆದುಕೊಳ್ಳುತ್ತದೆ. ಮೋಜು ಮಸ್ತಿಗೆಂದು ಬರುವವರು ತಾವು ತಂದಂತಹ ಮದ್ಯದ ಬಾಟಲಿಗಳನ್ನು ಎಲ್ಲಿ ಬೇಕೆಂದರಲ್ಲಿ ಎಸೆಯದೆ ತೆಗೆದುಕೊಂಡು ಹೋಗಿ ಕಸದ ತೊಟ್ಟಿಗೆ ಹಾಕುವುದನ್ನು ರೂಡಿಸಿಕೊಳ್ಳಬೇಕೆಂದು ಹೇಳಿದರು.
ಸ್ವಚ್ಚತೆಯಿರುವಲ್ಲಿ ದೇವರು ಇರುತ್ತಾನೆ ಎಂಬ ನಾಣ್ಣುಡಿ ಇದ್ದು, ಅದರಂತೆ ಈ ದೇವಾಲಯದ ಆವರಣದ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವ ಹೊಣೆಗಾರಿಕೆ ಇಲ್ಲಿಯ ಭಕ್ತ ಸಮೂಹದ ಮೇಲಿದೆ. ದೇವಾಲಯದ ಈ ಸುಂದರ ಪರಿಸರವು ಹಾಳಾಗಿರುವುದನ್ನು ಕಂಡ ನಾನು ಇಲ್ಲಿಯ ಪರಿಸರವನ್ನು ಸ್ವಚ್ಚಗೊಳಿಸಬೇಕೆಂಬ ಮಾಡಬೇಕೆಂಬ ಗುರಿಯಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದು ಎಲ್ಲರಿಗೂ ಮಾದರಿಯಾಗಲಿ. ನಮ್ಮ ಸುತ್ತಮುತ್ತಲ ಪರಿಸರದ ಸ್ವಚ್ಚತೆ ಕಾಪಾಡುವುದರಿಂದ ರೋಗರುಜಿನಗಳಿಂದ ಪಾರಾಗಬಹುದಲ್ಲದೆ, ಸುಂದರ ಪರಿಸರವಿದ್ದರೆ ಕಾಲಕಾಲಕ್ಕೆ ಮಳೆ ಸುರಿದು ಇಳೆಯು ಸಂಪದ್ಭರಿತವಾಗುತ್ತದೆ ಎಂದು ಹೇಳಿದರು.

firstsuddi

ಇದೇ ವೇಳೆ ಮಾತನಾಡಿದ ಇಂದಾವರ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಶೇಖ್ ಅಹಮ್ಮದ್, ವಿದ್ಯಾರ್ಥಿಗಳು ನಮ್ಮ ಗ್ರಾಮ ಪಂಚಾಯಿತಿಗೆ ಬಂದು ಛತ್ರಿ ಮರದಮ್ಮನವರ ದೇವಾಲಯದ ಆವರಣದ ಸ್ವಚ್ಚತೆಗೆ ಮುಂದಾಗಿರುವುದು ಸಂತೋಷದ ವಿಚಾರ. ಗಾಮ ಪಂಚಾಯಿತಿಯಿಂದ ಇಲ್ಲಿನ ಪರಿಸರವನ್ನು ಬಹಳಷ್ಟು ಬಾರಿ ಸ್ವಚ್ಚಗೊಳಿಸಿದರು, ಸಾರ್ವಜನಿಕರು ಇಲ್ಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದರಲ್ಲಿನ ಬೇಜಾವಬ್ದಾರಿತನದಿಂದ ಇಲ್ಲಿನ ಪರಿಸರ ಹಾಳಾಗುತ್ತಿದೆ. ವಿದ್ಯಾರ್ಥಿಗಳು ಓದಿನ ಜೊತೆಗೆ ಇಂತಹ ಪಠ್ಯೆತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮೈ ಮನಸ್ಸು ವಿಕಸನಗೊಳ್ಳುತ್ತದೆ ಎಂದು ಹೇಳಿದರು.
ಇದೇ ವೇಳೆ ನೋಬೆಲ್ ಪಿಯು ಕಾಲೇಜ್‍ನ ವಿದ್ಯಾರ್ಥಿ ವಿದ್ಯಾರ್ಥಿನಿಯರುಗಳು ದೇವಾಲಯದ ಆವರಣದ ಹೊರಗೆ ಮತ್ತು ಒಳಗೆ ಇರುವ ತ್ಯಾಜ್ಯವನ್ನು ತೆಗೆದು, ಕಳೆಗಿಡಗಳನ್ನು ಕೊಚ್ಚಿ ಪರಿಸರವನ್ನು ಸುಂದರಗೊಳಿಸಿದರು. ಕಾಲೇಜ್‍ನ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಸ್ವಚ್ಚತೆಯಲ್ಲಿ ಕೈ ಜೋಡಿಸಿ ವಿದ್ಯಾರ್ಥಿಗಳಿಗೆ ಹುರಿದುಂಬಿಸಿದರು.
ಕಾರ್ಯಕ್ರಮದಲ್ಲಿ ಇಂದಾವರ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಲಕ್ಷ್ಮಮ್ಮ ಚಂದ್ರಶೇಖರ್, ಸದಸ್ಯರಾದ ಲೋಲಾಕ್ಷಿ ಶೇಖರ್, ಧರ್ಮಪ್ಪ ಉಪಸ್ಥಿತರಿದ್ದು, ಸುಪ್ರಿತ ನಿರೂಪಿಸಿ ದಿಲೀಪ್ ವಂದಿಸಿದರು.