ಕೊಡಗು : ನಟಿ ರಶ್ಮಿಕಾ ಮಂದಣ್ಣ ಅವರ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜಿಲ್ಲೆಯ ವಿರಾಜಪೇಟೆಯಲ್ಲಿರುವ ತಮ್ಮ ನಿವಾಸದ ಮೇಲೆ ಐಟಿ ಅಧಿಕಾರಿಗಳ ತಂಡ ಇಂದು ಮುಂಜಾನೆ ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಇಂದು ಬೆಳಿಗ್ಗೆ 7ಗಂಟೆ ಸುಮಾರಿಗೆ ಟ್ಯಾಕ್ಸಿ ಮೂಲಕ ಆಗಮಿಸಿದ 10ಕ್ಕೂ ಹೆಚ್ಚು ಅಧಿಕಾರಿಗಳು ರಶ್ಮಿಕಾ ಅವರ ಮನೆಯಲ್ಲಿ ದಾಖಲಾತಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಐಟಿ ಅಧಿಕಾರಿಗಳು ಮೂರು ಕಾರಣಗಳಿಂದ ರಶ್ಮಿಕಾ ಮಂದಣ್ಣ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಮೊದಲನೆಯದಾಗಿ ರಶ್ಮಿಕಾ ಅವರು ಪಡೆಯುತ್ತಿರುವ ಸಂಬಳದ ಬಗ್ಗೆ ತಪ್ಪು ಮಾಹಿತಿ ನೀಡಿರುವುದು. ಟಾಲಿವುಡ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂದು ಹಾಗೂ ಜಾಹೀರಾತು ಏಜೆನ್ಸಿಗಳೊಂದಿಗೆ ವ್ಯವಹಾರ ನಡೆಸುತ್ತಿದ್ದಾರೆ ಎಂಬ ಮಾಹಿತಿ ಐಟಿ ಅಧಿಕಾರಿಗಳಿಗೆ ಲಭ್ಯವಾಗಿದ್ದು, ಹೀಗಾಗಿ ಬೆಳ್ಳಂಬೆಳಿಗ್ಗೆ ರಶ್ಮಿಕಾ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.










