ಶಿವಮೊಗ್ಗ ಕ್ಷೇತ್ರದಿಂದ ಜ್ಯೋತಿ ಪ್ರಕಾಶ್ ಟಿಕೆಟ್ ಗಾಗಿ ಒತ್ತಾಯ : ಈಶ್ವರಪ್ಪಗೆ ಶಾಕ್

712

ಬೆಂಗಳೂರು: ಕೆಎಸ್ ಈಶ್ವರಪ್ಪ ಮತ್ತು ರುದ್ರೇಗೌಡರ ನಡುವಿನ ಟಿಕೆಟ್ ಕಿತ್ತಟದಲ್ಲಿ ಮೂರನೇ ಆಕಾಂಕ್ಷಿ ಮುನ್ನೆಲೆಗೆ ಬಂದಿದ್ದಾರೆ. ಇಬ್ಬರಿಗೂ ಟಿಕೆಟ್ ಬೇಡ.. ನಮಗೆ ಕೊಡಿ.. ಎಂದು ರಾಜ್ಯ ಮತ್ತು ಕೇಂದ್ರ ನಾಯಕರಿಗೆ ಶಿವಮೊಗ್ಗ ಎಪಿಎಂಸಿ ಅಧ್ಯಕ್ಷರಾಗಿರುವ ಜ್ಯೋತಿ ಪ್ರಕಾಶ್ ಪತ್ರ ಬರೆದಿದ್ದಾರೆ. ಜೊತೆಗೆ ಈಶ್ವರಪ್ಪನವರಿಗೆ ನಿಮ್ಮ ಸ್ಥಾನ ಬಿಟ್ಟುಕೊಡಿ ಎಂದು ನೇರವಾಗಿಯೇ ಜ್ಯೋತಿ ಪ್ರಕಾಶ್ ಕೇಳಿದ್ದಾರೆ. ಈ ಬಾರಿ ಶಿವಮೊಗ್ಗ ನಗರ ಕ್ಷೇತ್ರದಿಂದ ನಾನು ಸ್ಪರ್ಧಿಸುತ್ತೇನೆ. 30 ವರ್ಷ ಪಕ್ಷಕ್ಕಾಗಿ ದುಡಿದಿದ್ದೀನಿ ಎಂದು ಜ್ಯೋತಿ ಪ್ರಕಾಶ್ ಹೇಳಿದ್ದಾರೆ. ಈ ಬೆಳವಣಿಗೆ ಈಶ್ವರಪ್ಪರನ್ನು ಕಂಗಾಲು ಮಾಡಿದೆ.

ಈಶ್ವರಪ್ಪಗೆ ಶಿವಮೊಗ್ಗ ನಗರ ಟಿಕೆಟ್ ಸಿಗಲ್ವಾ ಎಂಬ ಪ್ರಶ್ನೆ ಮೂಡಿದೆ.ಶಿವಮೊಗ್ಗ ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷರಾಗಿಯೂ ಜ್ಯೋತಿ ಪ್ರಕಾಶ್ ಸೇವೆ ಸಲ್ಲಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯನಾಯಕರಿಗೆ ಪತ್ರ ಬರೆದಿರುವ ಜ್ಯೋತಿ ಪ್ರಕಾಶ್ ತನಗೇ ಈ ಬಾರಿ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ನಾನು ಶಿವಮೊಗ್ಗ ಕ್ಷೇತ್ರದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದೇನೆ. ಈ ಬಗ್ಗೆ ಎಲ್ಲ ನಾಯಕರಿಗೂ ಮನವಿ ಕೊಟ್ಟಿದ್ದೀನಿ. ಹೈಕಮಾಂಡ್ ನಾಯಕರಿಗೂ ಮನವಿ ಮಾಡಿದ್ದೇನೆ.

ಎಲ್ಲರೂ ಪರಿಶೀಲಿಸುವ ಭರವಸೆ ನೀಡಿದ್ದಾರೆ. ಸ್ವತಃ ಈಶ್ವರಪ್ಪ, ರುದ್ರೇಗೌಡರಿಗೂ ಮನವಿ ನೀಡಿದ್ದೇನೆ. ಅವರೂ ಮನವಿ ಸ್ವೀಕರಿಸಿದ್ದಾರೆ. ಒಬ್ಬರು ಜಿಲ್ಲಾಧ್ಯಕ್ಷರು, ಮತ್ತೊಬ್ಬರು ರಾಜ್ಯ ನಾಯಕರು. ಯಾರೇ ಕಾರ್ಯಕರ್ತರು ಮನವಿ ನೀಡಿದ್ರೂ ತೆಗೆದುಕೊಳ್ಳುವುದು ಅವರ ಜವಾಬ್ದಾರಿ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧ ಎಂದು ಜ್ಯೋತಿ ಪ್ರಕಾಶ್ ಹೇಳಿದ್ದಾರೆ.