KSRTC ಬಸ್ ನಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ.

37

ಬೆಂಗಳೂರು: ಏಳು ತಿಂಗಳ ತುಂಬು ಗರ್ಭಿಣಿಯಾಗಿದ್ದ ರಜಿಯಾ ಬಾನು ಎಂಬ ಮಹಿಳೆ, ತಿಂಗಳಿನ ನಿಯಮಿತ ಪರೀಕ್ಷೆಗಾಗಿ ಹುಣಸನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿದ್ದರು ಆದರೆ ಅಲ್ಲಿನ ವೈದ್ಯರು ಕನಕಪುರ ಜಿಲ್ಲಾಸ್ಪತ್ರೆಗೆ ಹೋಗುವಂತೆ ಸಲಹೆ ನೀಡಿದ್ದಾರೆ. ಬಳಿಕ ಬಾನು ಕನಕಪುರ ಜಿಲ್ಲಾಸ್ಪತ್ರೆಗೆ ಕೆಎಸ್‍ಆರ್‍ಟಿಸಿ ಬಸ್ ನಲ್ಲಿ ಹೋಗುತ್ತಿದ್ದಾಗ ಕಬ್ಬಾಳು ಸಮೀಪ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಬಸ್ಸಿನಲ್ಲಿ ಪ್ರಯಾಣಿಸುತಿದ್ದ ಇತರ ಪ್ರಯಾಣಿಕರು ರಜಿಯಾ ಬಾನುಗೆ ಸಹಾಯ ಮಾಡಿದ್ದು, ಆಕೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಂತರ ಬಸ್ ನೇರವಾಗಿ ಕನಕಪುರ ಜಿಲ್ಲಾಸ್ಪತ್ರೆಗೆ ತೆರಳಿದ್ದು, ಬಾನು ಹಾಗೂ ಶಿಶುಗಳಿಗೆ ಪ್ರಾಥಮಿಕ ಚಿಕಿತ್ಸೆ ಒದಗಿಸಲಾಗಿದೆ. ಹೆರಿಗೆ ಅವಧಿಗೂ ಮುನ್ನವೇ ಹೆರಿಗೆ ಆಗಿದ್ದರಿಂದ ಮಕ್ಕಳ ತೂಕ ಕಡಿಮೆ ಇದ್ದು, ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಕನಕಪುರ ಜಿಲ್ಲಾಸ್ಪತ್ರೆ ವೈದ್ಯರು ಸೂಚಿಸಿದ್ದಾರೆ. ನಂತರ ನವಜಾತ ಶಿಶುಗಳನ್ನು ಆರೈಕೆ ಮಾಡಲು ವಾಣಿ ವಿಲಾಸ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ ನೀಡಿದರೂ ಕೂಡ ಮಗು ಚಿಕಿತ್ಸೆಗೆ ಸ್ಪಂದಿಸದೆ ಒಂದು ಮಗು ಸಾವನ್ನಪ್ಪಿದೆ. ಇನ್ನೊಂದು ಮಗು ಆರೋಗ್ಯವಾಗಿದ್ದು ಆ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರಜಿಯಾ ಬಾನು ಆರೋಗ್ಯ ಕೂಡಾ ಉತ್ತಮವಾಗಿದೆ ಎಂದು ವಾಣಿ ವಿಲಾಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಸವಿತಾ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.