ವಕೀಲರು ನೀಡಿದ ಸಹಕಾರ ಮರೆಯಲು ಸಾಧ್ಯವಿಲ್ಲ. – ಶಾಸಕ ಎಸ್.ಎಲ್.ಭೋಜೇಗೌಡ…

1037
firstsuddi

ಚಿಕ್ಕಮಗಳೂರು– ವಕೀಲರ ಕ್ಷೇಮಾಭಿವೃದ್ಧಿಗೆ ಪೂರಕವಾದ ಕ್ರಮಗಳನ್ನು ರಾಜ್ಯ ಸರ್ಕಾರದ ಮಟ್ಟದಲ್ಲಿ ಜರುಗಿಸಲು ತಾವು ಎಲ್ಲಾ ರೀತಿಯ ಪ್ರಯತ್ನ ವಹಿಸುವುದಾಗಿ ರಾಷ್ಟ್ರೀಯ ವಕೀಲರ ಪರಿಷತ್ ಮಾಜಿ ಉಪಾಧ್ಯಕ್ಷರು ಹಾಗೂ ಶಾಸಕರಾದ ಎಸ್.ಎಲ್.ಭೋಜೇಗೌಡ ತಿಳಿಸಿದ್ದಾರೆ.ನಗರದ ವಕೀಲರ ಸಂಘದ ಆವರಣದಲ್ಲಿ ವಕೀಲರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಅಭಿನಂದನೆಯನ್ನು ಸ್ವೀಕರಿಸಿ ನಂತರ ಮಾತನಾಡಿದ ಇವರು ಶಿಕ್ಷಕರ ಕ್ಷೇತ್ರದಿಂದ ನಾನು ವಿಧಾನಪರಿಷತ್‍ಗೆ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಇದಕ್ಕೂ ಮೊದಲು ಪದವೀಧರರ ಕ್ಷೇತ್ರದಿಂದ ಸ್ಪರ್ಧಿಸಿದಾಗ ನನಗೆ ವಕೀಲರು ನೀಡಿದ ಸಹಕಾರ ಮರೆಯಲು ಸಾಧ್ಯವಿಲ್ಲ ಎಂದರು.
ಕುಮಾರಸ್ವಾಮಿ ರವರ ನೇತೃತ್ವದ ಸರ್ಕಾರದಿಂದಲೇ ವಕೀಲರ ಪರಿಷತ್‍ಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡಿಸಲು ಮುಂದಾಗುವುದಾಗಿ ಅವರು ತಿಳಿಸಿ, ಈ ಮೂಲಕ ವಕೀಲರ ಕ್ಷೇಮಕ್ಕಾಗಿ ಒಂದಿಷ್ಟು ಕಾರ್ಯಗಳನ್ನು ಮಾಡಿಸಬೇಕಾಗಿದೆ.
ವಕೀಲರುಗಳು ನಿವೃತ್ತಿ ಹೊಂದುವಾಗ ಅಥವಾ ಅವರು ನಿಧನ ಹೊಂದಿದ ಸಂದರ್ಭದಲ್ಲಿ ಅವರುಗಳಿಗೆ ನೆರವಾಗುವ ನಿಟ್ಟಿನಲ್ಲಿ ವಕೀಲರ ಪರಿಷತ್ ಮೂಲಕ ಧನಸಹಾಯವನ್ನು 20 ಲಕ್ಷ ರೂ.ಗಳಿಗೆ ಹೆಚ್ಚಿಸಬೇಕಾಗಿದೆ.ವಕೀಲರ ಪರಿಷತ್‍ಗೆ ಸ್ವಂತ ಕಟ್ಟಡ ಇಲ್ಲ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ವಕೀಲರಿಗೆ ಅನುಕೂಲವಾಗುವ ರೀತಿಯಲ್ಲಿ ವಕೀಲರ ಭವನವನ್ನು ನಿರ್ಮಿಸಲು ಅನುದಾನ ಮೀಸಲಿಡಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಮಹಿಳಾ ವಕೀಲರುಗಳಿಗೆ ವಕೀಲರ ಸಂಘಗಳಲ್ಲಿ ಪ್ರತ್ಯೇಕ ಕೊಠಡಿಗಳನ್ನು ಸ್ಥಾಪಿಸಲು ಅನುದಾನ ಬಿಡಿಗಡೆ ಮಾಡಿಸಲು ತಾವು ಯತ್ನಿಸುವುದಾಗಿ ಭೋಜೇಗೌಡ ರವರು ತಿಳಿಸಿದರು.ವಕೀಲರು ತಮ್ಮ ಬದುಕಿನುದ್ದಕ್ಕೂ ತಮ್ಮ ಯಶಸ್ವಿಗೆ ಕಾರಣರಾದರು. ವಕೀಲರ ಕ್ಷೇಮಾಭಿವೃದ್ಧಿಗಾಗಿ ನಾನು ಕೈಯಲ್ಲಾಗುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು. ಬಡ ಬಗ್ಗರಿಗೆ ಏನೇ ಕುಂದು ಕೊರತೆ ಇದ್ದರೂ ಅವರಿಗಾಗಿ ಸ್ಪಂದಿಸಲು ತಾವು ಯಾವಾಗಲು ಸಿದ್ದ ಎಂದರು. ಇದೇ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಬಿ.ಟಿ.ದುಷ್ಯಂತ್,ಉಪಾಧ್ಯಕ್ಷರಾದ ಎಸ್. ಎಸ್.ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಸಿ.ಎಂ. ರಾಜೇಶ್,ವಕೀಲರುಗಳಾ ರಮೇಶ್,ಡಿ.ಬಿ.ಸುಜೇಂದ್ರ,ಮಹೇಶ್‍ಕುಮಾರ್,ಕೃಷ್ಣೇಗೌಡ,ಲೋಕೇಶ್,ಹೆಚ್.ವಿ. ವಿಶ್ವನಾಥ್ ಮುಂತಾದವರು ಉಪಸ್ಥಿತರಿದ್ದರು.