ಕಳಸ: ಮಂಜಿನಕಟ್ಟೆ ಸಮೀಪ ರಸ್ತೆಯಲ್ಲಿ ಉಂಟಾಗಿದ್ದ ಹೊಂಡ ಗುಂಡಿಯನ್ನು ಮುಚ್ಚುತ್ತಿದ್ದ ವೇಳೆ ಕಳಪೆ ಕಾಮಗಾರಿಯನ್ನು ಕಂಡ ಗ್ರಾಮಸ್ಥರು ತಡೆದು ಹೊಸ ಕಾಮಗಾರಿಯನ್ನು ನಡೆಸಿದ ಘಟನೆ ನಡೆಯಿತು.
ಕಳೆದ ವರ್ಷ ಇದೇ ರಸ್ತೆಗೆ ಡಾಮಾರೀಕರಣವನ್ನು ಮಾಡಲಾಗಿತ್ತು ಆ ಸಂದರ್ಭದಲ್ಲೂ ಕಳಪೆ ಕಾಮಗಾರಿಯನ್ನು ಪ್ರಶ್ನಿಸಿದ್ದ ಗ್ರಾಮಸ್ಥರು ಹಾಕಿರುವ ಡಾಂಬಾರನ್ನು ಕೀಳಿಸಿ ಹೊಸ ಡಾಂಬಾರೀಕರಣ ಮಾಡಿಸಿದ್ದರು.ಆದರೂ ಕೇವಲ ಎರಡೇ ತಿಂಗಳಿನಲ್ಲಿ ಮಂಜಿನಕಟ್ಟೆ ಸಮೀಪ ದೊಡ್ಡದಾದ ಹೊಂಡವು ನಿರ್ಮಾಣವಾಗಿತ್ತು.ಆ ಸಂದರ್ಭದಲ್ಲೂ ಗ್ರಾಮಸ್ಥರು ಪ್ರತಿಭಟನೆ ಮಾಡಿದ ಹಿನ್ನಲೆಯಲ್ಲಿ ಹೊಂಡವನ್ನು ಮುಚ್ಚಿ ಮಳೆಗಾಲ ಕಳೆದ ಕೂಡಲೇ ಡಾಂಬಾರು ಹಾಕಿ ಮುಚ್ಚಿ ಕೊಡುವ ಭರವಸೆಯನ್ನು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ನೀಡಿದ್ದರು.
ಅದರಂತೆ ಕಾಮಗಾರಿಯ ನಿರ್ವಹಣೆಗೆ ಸೋಮವಾರ ಬೆಳಗ್ಗೆಯೇ ಕಾರ್ಮಿಕರು ಬಂದು ಹೊಂಡಕ್ಕೆ ಡಸ್ಟ್ ಹಾಕಿ ಮೇಲ್ಬಾಗಕ್ಕೆ ಡಾಂಬಾರು ಹಾಕಿ ಹೋಗುವ ಹಂತದಲ್ಲಿ ಇದ್ದರು.ಕೂಡಲೇ ಗ್ರಾಮಸ್ಥರು ಒಟ್ಟಾಗಿ ಕಾಮಗಾರಿಯ ಬಗ್ಗೆ ಪ್ರಶ್ನಿಸಿ ಇದನ್ನು ಕಿತ್ತು ಸರಿಯಾದ ಕ್ರಮ ಬದ್ದವಾಗಿ ಡಾಂಬರೀಕರಣ ಮಾಡಬೇಕು,ಇಲ್ಲವಾದರೆ ಕೆಲಸವನ್ನು ಮಾಡಲು ಬಿಡುವುದಿಲ್ಲ.ನಿಮ್ಮ ಕುಷಿ ಪ್ರಕಾರ ಕೆಲಸ ಮಾಡುವುದಲ್ಲ.ಮಾಡಿರುವ ಕೆಲಸ ಸದ್ವಲ್ಪ ದಿನವಾದರೂ ಬಾಳಿಕೆ ಬರಬೇಕು ಎಂದು ಕಾಮಗಾರಿಗೆ ಬಂದಿರುವ ವಾಹನಗಳನ್ನು ತಡೆಹಿಡಿದರು.ಆದರೆ ಈ ಸಂದರ್ಭದಲ್ಲಿ ಸಂಬಂದಿಸಿದ ಇಂಜಿನೀಯರಾಗಲೀ,ಗುತ್ತಿಗೆದಾರರಾಗಲೀ ಇರಲಿಲ್ಲ.ನಮಗೆ ಇಷ್ಟೇ ಕಾಮಗಾರಿಯನ್ನು ಮಾಡಲು ಸೂಚಿಸಿದ್ದಾರೆ ಎಂದು ಕಾರ್ಮಿಕರು ತಿಳಿಸಿದರು.ಆದರೆ ಗ್ರಾಮಸ್ಥರು ಪಟ್ಟು ಬಿಡದೆ ಕುಳಿತು ಮಾಡಿರುವ ಕೆಲಸವನ್ನು ಸಂಪೂರ್ಣವಾಗಿ ಕೀಳಿಸಿ ಕ್ರಮ ಬದ್ದವಾಗಿ ಗುಂಡಿ ಮುಚ್ಚಿಸಿ ಡಾಂಬಾರು ಹಾಕುವವರೆಗೆ ನಿಂತು ಮಾಡಿಸಿದರು.ಇನ್ಯಾವತ್ತೂ ಈ ರೀತಿಯ ಕಳಪೆ ಕೆಲಸವನ್ನು ಎಲ್ಲಿಯೂ ಮಾಡಬಾರದು.ಇದು ನಿಮಗೆ ಯಾವತ್ತೂ ಪಾಠವಾಗಬೇಕು ಎಂದು ಹೇಳಿ ಕಳುಹಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಕಾಶ್ ಕುಮಾರ್,ಸದಸ್ಯರಾದ ರಾಮಮೂರ್ತಿ,ಭಾಸ್ಕರ್,ಗ್ರಾಮಸ್ಥರಾದ ಜಯಂತ್ ತೆಂಡೂಲ್ಕರ್,ಅಂಬರೀಶ್ ಭಟ್,ಟಿಟ್ಟು ತೋಮಸ್,ಯೊಗೀಶ್ ಭಟ್,ವೀರೇಂದ್ರ,ಜಗದೀಶ್ ಭಟ್,ಶೇಖರ ಶೆಟ್ಟಿ,ಅಬ್ಬಕ್ಕ,ಮಹೇಶ್ ಇತರರು ಇದ್ದರು.










