ರಾಜ್ಯಕ್ಕೆ ಮಾದರಿ ಶಾಲೆ ಚಿಕ್ಕಮಗಳೂರಿನ ಮೆಣಸೆ ಸರ್ಕಾರಿ ಶಾಲೆ …

1374

 

ಚಿಕ್ಕಮಗಳೂರು: ಶೃಂಗೇರಿ ತಾಲೂಕಿನ ಮೆಣಸೆ ಸರ್ಕಾರಿ ಶಾಲೆ ರಾಜ್ಯಕ್ಕೆ ಮಾದರಿ ಶಾಲೆಯಾಗಿದ್ದು, ಇದು ಸರ್ಕಾರಿ ಶಾಲೆ ಅಂತ ಅಸಡ್ಡೆ ತೋರುವಂತಿಲ್ಲ. ಈ ಶಾಲೆಯಲ್ಲಿನ ಸೌಲಭ್ಯ ಯಾವ ಖಾಸಗಿ ಶಾಲೆಯಲ್ಲೂ ಇಲ್ಲ. ಬೇಕಾಬಿಟ್ಟಿ ದುಡ್ಡು ಪೀಕೋ ಖಾಸಗಿ ಶಾಲೆಗಳಿಗೆ ಮೆಣಸೆ ಸರ್ಕಾರಿ ಶಾಲೆ ಸೆಡ್ಡು ಹೊಡೆಯೋತ್ತಿರೋದ್ರಲ್ಲಿ ಅನುಮಾನವೇ ಇಲ್ಲ. ಕಣ್ಣಿಗೆ ಬಟ್ಟೆ ಕಟ್ಟಿ ಒಳಗೆ ಕರೆದೊಯ್ದು ಬಿಟ್ರೆ, ಇಲ್ಲಿನ ಸೌಲಭ್ಯ ನೋಡಿ ಇದ್ಯಾವುದೋ ಹೈಟೆಕ್ ಶಾಲೆ ಇರಬೇಕು. ಇಲ್ಲಿ ಫೀಸ್ ಎಷ್ಟು ಅಂತಾರೆ. ಅಸಲಿಗೆ ಅದು ಸರ್ಕಾರಿ ಶಾಲೆ. ಇದು ಮಕ್ಕಳಿಗೆ ಶಾಲೆಗೆ ತೆರಳಲು ಬಸ್ ವ್ಯವಸ್ಥೆ ಇರುವ ಏಕೈಕ ಸರ್ಕಾರಿ ಶಾಲೆ. ಈ ಶಾಲೆ ರಾಜ್ಯಕ್ಕಲ್ಲ, ದೇಶಕ್ಕೆ ಮಾದರಿ ಅಂದ್ರು ತಪ್ಪಿಲ್ಲ.

ಓಡಾಡೋದಕ್ಕೆ ಬಸ್. ಸುಸರ್ಜಿತ ಕೊಠಡಿ. ಸಮೃದ್ಧ ಕ್ರೀಡಾಂಗಣ, ಸಭಾಂಗಣ ಹಾಗೂ ಗ್ರಂಥಾಲಯ. ಸ್ಮಾರ್ಟ್ ಕ್ಲಾಸ್, ಕಂಪ್ಯೂಟರ್ ಕ್ಲಾಸ್, ಲ್ಯಾಬ್, ಡ್ಯಾನ್ಸ್, ಯೋಗ, ಸಂಗೀತ. ಮಕ್ಕಳ ಸಮೃದ್ಧ ಜೀವನದ ಅಡಿಪಾಯಕ್ಕೆ ಎಲ್ಲಾ ಸೌಲಭ್ಯಗಳು ಒಂದೇ ಸೂರಿನಡಿ, ಅದು ಸರ್ಕಾರಿ ಶಾಲೆಯಲ್ಲಿ ಸಿಗುತ್ತೆ ಅಂದ್ರೆ ನಿಜಕ್ಕೂ ಅದು ನಮ್ಮ ಪುಣ್ಯವೇ ಸರಿ. ಅಂತಹದ್ದೊಂದು ಹೆಗ್ಗಳಿಕೆಗೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಮೆಣಸೆಯ ಸರ್ಕಾರಿ ಶಾಲೆ ಪಾತ್ರವಾಗಿದೆ. ಈ ಶಾಲೆಯು ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲ. ಶೃಂಗೇರಿ ತಾಲೂಕಿನ ಎಲ್ಲಾ ಖಾಸಗಿ ಶಾಲೆಗಳಿಂತ ಈ ಸರ್ಕಾರಿ ಶಾಲೆ ಒಂದು ಹೆಜ್ಜೆ ಮುಂದಿದೆ. ಇಲ್ಲಿನ ಸೌಲಭ್ಯ, ಶಿಕ್ಷಣ ಕಂಡು ತಮ್ಮ ಮಕ್ಕಳನ್ನ ಖಾಸಗಿ ಶಾಲೆಗೆ ಸೇರಿಸಿದ್ದ ಪೋಷಕರು ಅಲ್ಲಿ ಬಿಡಿಸಿ ಈ ಶಾಲೆಗೆ ಸೇರಿಸಿದ್ದಾರೆ. ಇಲ್ಲಿ ಶಿಕ್ಷಕರ ಕೊರತೆ ಕೂಡ ಇಲ್ಲ. ಒಂದೊಂದು ವಿಷಯಕ್ಕೆ ನುರಿತ ಶಿಕ್ಷಕರಿದ್ದು, ಮಕ್ಕಳೊಂದಿಗೆ ಮಕ್ಕಳಾಗಿ ಪಾಠ ಹೇಳಿ ಕೊಡುತ್ತಿದ್ದಾರೆ. ಈ ಶಾಲೆಯಂತೆ ಸೌಲಭ್ಯ, ಶಿಕ್ಷಣ ಕಂಡ ಮಕ್ಕಳು ಅವರ ಸರ್ಕಾರಿ ಶಾಲೆಯ ಬಗ್ಗೆ ಹೆಮ್ಮೆ ಪಡ್ತಾರೆ.

ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಶಾಲಾ ಶಿಕ್ಷಕಿ ಸಂಗೀತರವರು ಈ ಶಾಲೆಗೆ ಕೇವಲ ಮೆಣಸೆ ಸುತ್ತಮುತ್ತಲಿನ ಮಕ್ಕಳು ಮಾತ್ರ ಬರುತ್ತಿಲ್ಲ. ಮೆಣಸೆಯಿಂದ 25 ಕಿ.ಮೀ. ದೂರದ ಕೊಪ್ಪ ತಾಲೂಕಿನ ಮಕ್ಕಳು ಕೂಡ ಈ ಶಾಲೆಗೆ ಬರುತ್ತಿದ್ದಾರೆ. ಈ ಶಾಲೆಯಲ್ಲಿ ಮಕ್ಕಳಿಗೆ ಓಡಾಡೋದಕ್ಕೆ ಖಾಸಗಿ ಶಾಲೆಯಂತೆ ಬಸ್ ಬಿಡಲಾಗಿದೆ. ಸ್ಥಳಿಯರು, ಸರ್ಕಾರ ಹಾಗೂ ಶಿಕ್ಷಕರ ಪ್ರಯತ್ನದಿಂದ ಇಂದು ಈ ಸರ್ಕಾರಿ ಶಾಲೆ ಮಾದರಿ ಶಾಲೆಯಾಗಿದೆ. ಮಕ್ಕಳಿಗೆ ರುಚಿಕರವಾದ ಬಿಸಿಯೂಟ ನೀಡಲಿದ್ದು, ಕುಡಿಯೋಕೆ ಶುದ್ಧ ನೀರಿನ ಸೌಲಭ್ಯ ಕೂಡ ಮಾಡಲಾಗಿದೆ ಎಂದಿದ್ದಾರೆ.

ವಿದ್ಯಾರ್ಥಿನಿ ಪ್ರೀತಿ ಮಾತನಾಡಿ ಈ ಶಾಲೆಯಲ್ಲಿ ಶಿಕ್ಷಕರು ಶಿಕ್ಷಣದ ಜೊತೆ ಪ್ರತಿಯೊಂದು ಮಕ್ಕಳ ಮೇಲೂ ಗಮನ ಹರಿಸಿ, ಅವರಿಗೆ ಇಷ್ಟವಾದ ಕ್ಷೇತ್ರದ ಬಗ್ಗೆ ವಿಶೇಷ ತರಬೇತಿ ನೀಡುತ್ತಿದ್ದಾರೆ. ಶಿಕ್ಷಣ, ಕ್ರೀಡೆ, ಡ್ಯಾನ್ಸ್, ಸಂಗೀತ ಹೀಗೆ ಹತ್ತು ಹಲವು ವಿಷಯಗಳ ಕುರಿತಂತೆ ಮಕ್ಕಳಿಗೆ ಇಷ್ಟವಾದ ಕ್ಷೇತ್ರದಲ್ಲೂ ತರಬೇತಿ ನೀಡುತ್ತಿದ್ದಾರೆ ಎಂದು ತಿಳಿಸಿದರು.

firstsuddi

ಕಾಫಿನಾಡಲ್ಲಿ ಐದು ವರ್ಷಗಳಲ್ಲಿ 30ಕ್ಕೂ ಅಧಿಕ ಶಾಲೆಗಳು ಬಾಗಿಲು ಹಾಕಿವೆ. ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತರುವ ಬದಲು ಖಾಸಗಿ ಶಾಲೆಗಳಂತೆ ಸರ್ಕಾರಿ ಶಾಲೆಯಲ್ಲೂ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಿದರೆ ಬಹುಶಃ ಯಾವ ಸರ್ಕಾರಿ ಶಾಲೆಯೂ ಬಾಗಿಲು ಹಾಕೋದಿಲ್ಲ ಅನ್ಸತ್ತೆ. ಸರ್ಕಾರ ಆ ನಿಟ್ಟಿನಲ್ಲೂ ಯೋಚಿಸಿ ಸರ್ಕಾರಿ ಶಾಲೆಗಳನ್ನು ಉಳಿಸೋದಕ್ಕೆ ಮುಂದಾಗುತ್ತಾ ಕಾದುನೋಡ್ಬೇಕು. ರಾಜ್ಯದ ಪ್ರತಿಯೊಂದು ಸರ್ಕಾರಿ ಶಾಲೆಯೂ ಇದೇ ರೀತಿಯಾದರೆ, ಖಾಸಗಿ ಶಾಲೆಗಳು ಬಾಗಿಲು ಹಾಕುವುದರಲ್ಲಿ ಅನುಮಾನವಿಲ್ಲ.