ಶಾಸಕರು, ಅಧಿಕಾರಿಗಳು ದಿನ ಇದೇ ರಸ್ತೆಯಲ್ಲಿ ಓಡಾಟ ನಡೆಸಿದರು ಅವರ ಕಣ್ಣಿಗೆ ಈ ಗುಂಡಿಗಳು ಕಾಣದಿರೋದು ಮೂಡಿಗೆರೆ ಜನರ ದುರಂತ…

1886

ಫಸ್ಟ್ ಸುದ್ದಿ : ಅಂದು ರಸ್ತೆ ನಿರ್ಮಾಣ ಮಾಡುವಾಗ ಅಧಿಕಾರಿಗಳು ಗಮನ ಹರಿಸಿದ್ರೆ ಇಂದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ರಸ್ತೆಗೆ ಈ ದುಸ್ಥಿತಿ ಬರುತ್ತಿರಲಿಲ್ಲ. ಟೆಂಡರ್ ಕೊಟ್ಟಮೇಲೆ ನಮ್ಮ ಕೆಲಸ ಮುಗಿಯಿತು ಎಂದು ಅಧಿಕಾರಿಗಳು ಕಚೇರಿ ಸೇರಿಕೊಂಡ ಪರಿಣಾಮ ಇಂದು ಈ ರಸ್ತೆ ರಸ್ತೆಯಾಗಿರದೆ ಗುಂಡಿ-ಗೊಟರು, ಅಡಿಯಾಳದ ಹಳ್ಳ-ಕೊಳ್ಳಗಳ ಅಪಾಯವನ್ನ ಆಹ್ವಾನಿಸುವಂತಹಾ ರಸ್ತೆಯಾಗಿದೆ. ಮೂಡಿಗೆರೆ ನಗರದ ದ್ವಾರವಾದ ಬಿಳಗುಳದಿಂದ ಕೊಟ್ಟಿಗೆಹಾರದವರೆಗೂ ಬಹುತೇಕ ರಸ್ತೆ ರಸ್ತೆಯಾಗಿಲ್ಲ. ಹ್ಯಾಂಡ್ ಪೋಸ್ಟ್ ನಿಂದ ಕೊಟ್ಟಿಗೆಹಾರದವರೆಗಿನ ರಸ್ತೆ ಪರವಾಗಿಲ್ಲ. ಆದರೆ, ಹೆಚ್ಚಿನ ಜನಸಂದಣಿ, ಪ್ರವಾಸಿ ವಾಹನಗಳು ಓಡಾಡೋ ಮೂಡಿಗೆರೆಯ ನಗರದೊಳಗಿನ ರಸ್ತೆ ಮಾತ್ರ ಅಧಿಕಾರಿಗಳಿಗೆ ಪ್ರಿಯ.

ಇದು ಹೇಳಿಕೊಳ್ಳೋಕೆ ರಾಷ್ಟ್ರೀಯ ಹೆದ್ದಾರಿ 173. ಆದರೆ, ಕಾಡಿನ ದಾರಿಗಿಂತ ದುರ್ಗಮವಾಗಿದೆ. ರಸ್ತೆ ದುರಸ್ತಿ ಮಾಡುವಾಗ ಸಂಪೂರ್ಣವಾಗಿ ರಸ್ತೆ ಇರುವಷ್ಟು ಅಗಲಕ್ಕೂ ಟಾರ್ ಹಾಕಿದಿದ್ದರೆ ಯಾವುದೇ ತೊಂದರೆ ಆಗುತ್ತಿರಲಿಲ್ಲ. ಆದರೆ, ಅಧಿಕಾರಿಗಳು ಎಲ್ಲೆಲ್ಲಿ ಗುಂಡಿ ಬಿದ್ದಿತ್ತೋ ಅಲ್ಲಿಗೆ ಮಾತ್ರ ಪ್ಯಾಚ್ ಹಾಕಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ. ರಸ್ತೆ ದುರಸ್ಥಿಗೆ ಬಂದ ಹಣವನ್ನ ಅಧಿಕಾರಿಗಳು ಪ್ಯಾಚ್ ಹಾಕಿ ಗುಳುಂ ಮಾಡಿದ್ದಾರೆ ಎಂದು ಜನ ಮಾತನಾಡಿಕೊಳ್ತಿದ್ದಾರೆ. ಬಿ.ಬಿ. ನಿಂಗಯ್ಯ ಶಾಸರಾಗಿದ್ದಾಗಲೂ ಸಾರ್ವಜನಿಕರು ರಸ್ತೆ ದುರಸ್ಥಿ ಮಾಡುವಂತೆ ಹತ್ತಾರು ಬಾರಿ ಮನವಿ ಮಾಡಿಕೊಂಡಿದ್ದರು. ಆದರೆ ಅವರು ಇಂದು-ನಾಳೆ-ನಾಡಿದ್ದು, ಹಣ ಬಂದಿಲ್ಲ, ಬರುತ್ತೆ ಎಂದು ಹೇಳುತ್ತಲೇ ಚುನಾವಣೆಯಲ್ಲಿ ಸೋತರು. ಕುಮಾರಸ್ವಾಮಿಯವರು ದಿನ ಇದೇ ರಸ್ತೆಯಲ್ಲಿ ಓಡಾಡುತ್ತಾರೆ ಅವರ ಕಣ್ಣಿಗೂ ಈ ರಸ್ತೆ ಕಂಡಿಲ್ಲವೇ ಇವರಾದ್ರು ಗಮನ ಹರಿಸಿ ಕೂಡಲೇ ರಸ್ತೆ ದುರಸ್ಥಿಗೆ ಮುಂದಾಗುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಆದ್ರೆ, ಶಾಸಕರು, ಅಧಿಕಾರಿಗಳು ದಿನ ಇದೇ ರಸ್ತೆಯಲ್ಲಿ ಓಡಾಟ ನಡೆಸಿದರು ಅವರ ಕಣ್ಣಿಗೆ ಈ ಗುಂಡಿಗಳು ಕಾಣದಿರೋದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಇನ್ನು ಈ ರಸ್ತೆ ರಾಷ್ಟ್ರೀಯ ಹೆದ್ದಾರಿ ಆಗಿರೋದ್ರಿಂದ ಸಂಸದರಾದ ಶೋಭಾ ಕರಾಂದ್ಲಾಜೆ ಗಮನಕ್ಕೆ ತರೋಣ ಅಂದ್ರೆ ಅವರು ಕಾರ್ಯಕ್ರಮಗಳಿಗೆ ಮಾತ್ರ ಮೂಡಿಗೆರೆಗೆ ಬರುತ್ತಾರೆ, ವಿನಃ ಜನಸಾಮಾನ್ಯರ ನೋವು ಕೇಳೋಕಲ್ಲ ಅನ್ನೋದು ಜನರ ಅಭಿಪ್ರಾಯ. ಅಷ್ಟೆ ಅಲ್ಲದೆ, ಅವರು ಉಡುಪಿಯಿಂದ ಚಿಕ್ಕಮಗಳೂರಿಗೆ ಬರೋದು ಹಾಗೂ ಚಿಕ್ಕಮಗಳೂರಿನಿಂದ ಉಡುಪಿಗೆ ಹೋಗೋದು ಇದೇ ಮಾರ್ಗದಲ್ಲಿ. ಆದರೆ, ಅವರ ಕಣ್ಣಿಗೂ ರಸ್ತೆ ಬಿದ್ದಿಲ್ಲವೇ ಅನ್ನೋದು ಜನಸಾಮಾನ್ಯರ ಯಕ್ಷಪ್ರಶ್ನೆ. ಜನ ಸರ್ಕಾರಕ್ಕಾಗ್ಲಿ, ಅಧಿಕಾರಿಗಳಿಗಾಗ್ಲಿ ಏನನ್ನೂ ಕೇಳೋದಿಲ್ಲ. ಅವ್ರು ಕೇಳೊದು ರಸ್ತೆ, ನೀರು, ಚರಂಡಿ, ವಿದ್ಯುತ್ನಂತಹಾ ಮೂಲಭೂತ ಸೌಲಭ್ಯಗಳನ್ನಷ್ಟೆ. ಅಧಿಕಾರಿಗಳು ಹಾಗೂ ಸರ್ಕಾರ ಅವುಗಳನ್ನಾದ್ರು ಜನರಿಗೆ ಸರಿಯಾಗಿ ನೀಡಲಿ ಎಂದು ಮೂಡಿಗೆರೆ ಜನ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.