ಮೂಡಿಗೆರೆ: ಸರ್ಕಾರಿ ಜಾಗದಲ್ಲಿ ಅನಧಿಕೃತ ಮಳಿಗೆಯನ್ನು ತೆರವುಗೊಳಿಸುವಂತೆ ಬೀದಿ ಬದಿ ವ್ಯಾಪಾರಿಗಳ ಆಗ್ರಹ…

598
firstsuddi

ಮೂಡಿಗೆರೆ : ಪಟ್ಟಣದ ಬಸ್ ನಿಲ್ದಾಣದ ಸಮೀಪವಿರುವ ತಾಲ್ಲೂಕು ಪಂಚಾಯಿತ್ ಗೆ ಸೇರಿದ ಡಾ.ಅಡ್ಯಂತಾಯರಂಗ ಮಂದಿರದ ಹಿಂಬಾಗದಲ್ಲಿ  ರಾತ್ರೋ ರಾತ್ರಿ ಅನಧಿಕೃತವಾಗಿ ಕಬ್ಬಿಣದಿಂದ ಅಂಗಡಿ ಮಳಿಗೆಯೊಂದು ನಿರ್ಮಾಣವಾಗಿದ್ದು, ಕೂಡಲೇ ಮಳಿಗೆಯನ್ನು ತೆರವುಗೊಳಿಸುವಂತೆ ಬೀದಿ ಬದಿ ವ್ಯಾಪಾರಿಗಳು ಒತ್ತಾಯಿಸಿದ್ದಾರೆ.ತಾವು ಹೊಟ್ಟೆ ಪಾಡಿಗೆ ಬಿಸಿಲು ಮಳೆ ಎನ್ನದೆ ವ್ಯಾಪಾರ ಮಾಡಿಕೊಂಡಿದ್ದರೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಏಕಾಏಕಿ ನಮ್ಮನ್ನು ತೆರವುಗೊಳಿಸಿ ವಾಹನದ ಓಡಾಟವೇ ಇಲ್ಲದಂತಹ ಜಾಗದಲ್ಲಿ ವ್ಯಾಪಾರ ಮಾಡಿ ಎನ್ನುತ್ತಾರೆ. ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಪಕ್ಕದಲ್ಲಿ ಪಟ್ಟಣ ಪಂಚಾಯಿತಿ ವ್ಯಾಪಾರ ಮಳಿಗೆಯ ಕೊಠಡಿಗಳನ್ನು  ನಿರ್ಮಿಸಿ  ಕಳೆದ ನಾಲ್ಕೈದು ವರ್ಷ ಕಳೆದರು ಅದನ್ನು ಬಾಡಿಗೆಗೆ ನೀಡುವಲ್ಲಿ ಪಟ್ಟಣ ಪಂಚಾಯಿತಿ ವಿಫಲವಾಗಿದ್ದು,  ಪರವಾನಗೆ ಇರದ ಮಾಂಸದ ಮಳಿಗೆಗಳನ್ನು ಮುಚ್ಚಿಸುವುದಾಗಿ ಸಭೆಯಲ್ಲಿ ತಿರ್ಮಾನಿಸಿ 15 ದಿನ ಕಳೆದರೂ ಅವುಗಳನ್ನು ತೆರವುಗೊಳಿಸುವಲ್ಲಿ ವಿಫಲವಾಗಿರುವ ಬೆನ್ನಲ್ಲೆ ರಂಗಮಂದಿರದ ಹಿಂಭಾಗದಲ್ಲಿ ಜನರೇಟರ್ ಇಡುವ ಜಾಗದಲ್ಲಿ ಮಳಿಗೆ ನಿರ್ಮಾಣವಾಗಿದೆ ಎಂದರೆ ತಾಲೂಕು ಪಂಚಾಯಿತಿ ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ಗೋಚರವಾಗುತ್ತಿದೆ. ಅಧಿಕಾರಿಗಳು ಅನಧಿಕೃತ ಮಳಿಗೆಯನ್ನು ತೆರವುಗೊಳಿಸದೆ ಇದ್ದಲ್ಲಿ ಬೀದಿ ಬದಿಯ ಎಲ್ಲಾ ವ್ಯಾಪಾರಿಗಳು ತಮ್ಮ ಹೊಟ್ಟೆ ಪಾಡಿಗಾಗಿ ರಸ್ತೆ ಬದಿಗಳಲ್ಲೆ ಹಿಂದಿನಂತೆ ಅಂಗಡಿ ಹಾಕಿಕೊಂಡು ವ್ಯಾಪಾರ ನಡೆಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.