ಕಳಸ: ಸಮೀಪದ ಪುರಾಣ ಪ್ರಸಿದ್ಧ ಹಳುವಳ್ಳಿ ಶ್ರೀಮಹಾಗಣೇಶ್ವರ ಸುಬ್ರಹ್ಮಣೈಶ್ವರ ಸ್ವಾಮಿಯವರ ರಥೋತ್ಸವವು ಗುರುವಾರ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.ಪ್ರತಿ ವರ್ಷದಂತೆ ಈ ವರ್ಷವೂ ವಿವಿಧ ಧಾರ್ಮಿಕ,ಸಾಂಸ್ಕøತಿಕ ಕಾರ್ಯಕ್ರಮಗಳಿದ್ದು, ರಥೋತ್ಸವದಲ್ಲಿ ಸಾವಿರಾರು ಭಕ್ತಾಧಿಗಳು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡರು. ಗುರುವಾರ ಮದ್ಯಾಹ್ನ ಮಂಗಳಾರತಿ ಮುಗಿದ ಬಳಿಕ ಸುಬ್ರಹ್ಮಣ್ಯ ದೇವರ ವಿಗ್ರಹವನ್ನು ಹೊತ್ತುಕೊಂಡು ಛತ್ರಿ ಚಾಮರ ಮಂಗಳ ವಾದ್ಯಗಳೊಂದಿಗೆ ದೇವಸ್ಥಾನದಲ್ಲಿ ಸುತ್ತು ಸೇವೆ ನಡೆಸಿ, ನಂತರ ಸಿಂಗಾರಗೊಂಡ ಬ್ರಹ್ಮ ರಥದಲ್ಲಿ ಇಟ್ಟು ಪೂಜಿಸಲಾಯಿತು.
ರಥೋತ್ಸವ ನಡೆಯುವ ಮೊದಲು ಬ್ರಹ್ಮ ರಥದ ನೇರಕ್ಕೆ ಬಾನೆತ್ತರದಲ್ಲಿ ಗರುಡ ಮೂರು ಬಾರಿ ಪ್ರದಕ್ಷಿಣೆ ಹಾಕಿದ ನಂತರ ಸುಬ್ರಹ್ಮಣ್ಯ ರಥೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಭಕ್ತಾದಿಗಳು ತಮ್ಮ ಹರಕೆಯಂತೆ ತಾವು ಬೆಳೆದ ಕಾಳು ಮೆಣಸು, ಏಲಕ್ಕಿ,ಅಡಿಕೆ,ಕಾಫಿ ಬೀಜ ಇತ್ಯಾದಿ ದವಸ ದಾನ್ಯಗಳನ್ನು ರಥಕ್ಕೆ ಎಸೆದು ಕೃತಾರ್ಥರಾದರು.ನೆರೆದ ಸಾವಿರಾರು ಭಕ್ತಾಧಿಗಳು ರಥ ಎಳೆಯುವುದರೊಂದಿಗೆ ಕೃತಾರ್ಥರಾದರೆ,ತಮ್ಮ ಕಷ್ಟಕಾಲಕ್ಕೆ ಹರಕೆ ಹೊತ್ತುಕೊಂಡ ಭಕ್ತರು ಹಾವಿನ ಹೆಡೆ,ಹಾವಿನ ಮೊಟ್ಟೆ, ಮಗು ತೊಟ್ಟಿಲು ಮುಂತಾದ ಬೆಳ್ಳಿ ವಸ್ತುಗಳನ್ನು ಹರಕೆ ರೂಪದಲ್ಲಿ ದೇವರಿಗೆ ಅರ್ಪಿಸಿದರು.ಈ ಜಾತ್ರೆ ಮಹೋತ್ಸವದಲ್ಲಿ ಕಳಸ ಸಂಸೆ, ಹೊರನಾಡು, ಬಾಳೆಹೊಳೆ, ಮುನ್ನೂರುಪಾಲ್, ಹಿರೇಬೈಲು, ಮಾವಿನಕೆರೆ ಮುಂತಾದ ಬಾಗಗಳಿಂದ ಸಾವಿರಾರು ಜನ ಭಾಗವಹಿಸಿದ್ದರು.










