ಮೂಡಿಗೆರೆ : ಸರ್ಕಾರ ಕುರುಡಾಯಿತು, ಸಂಬಂಧವಿಲ್ಲದವರ ಮನ ಕರಗಿತು, ದಾರದಹಳ್ಳಿ ಸರ್ಕಾರಿ ಶಾಲೆಗೆ ಹೊಸ ರೂಪ ಸಿಕ್ಕಿತು…

3568
  • ರಾಘವೇಂದ್ರ  ಕೆಸವಳಲು 

ಮೂಡಿಗೆರೆ : 1979ರಲ್ಲಿ ಆರಂಭಗೊಂಡ ತಾಲೂಕಿನ ದಾರದಹಳ್ಳಿ ಸರ್ಕಾರಿ ಪ್ರೌಢ ಶಾಲೆ ಸಾವಿರಾರು ಮಕ್ಕಳಿಗೆ ಬದುಕಿಗೆ ದಾರಿದೀಪವಾಗಿತ್ತು. ಅಕ್ಷರದ ದಾನ ಮಾಡಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಶಾಲೆಯ ಕಟ್ಟಡ ಸಂಪೂರ್ಣ ಹಾಳಾಗಿತ್ತು. ಶಾಲೆ ಸುಣ್ಣ-ಬಣ್ಣ ಕಾಣದೆ ವರ್ಷಗಳೇ ಕಳೆದಿದ್ದವು. ಮಳೆ-ಗಾಳಿಗೆ ಮೇಲ್ಛಾವಣಿ ಕುಸಿಯೋ ಹಂತದಲ್ಲಿತ್ತು. ಕಳೆದೆರಡು ವರ್ಷಗಳ ಮಹಾಮಳೆಯಿಂದ ಶಾಲೆ ಇಂದೋ-ನಾಳೆಯೋ ಎಂಬಂತಿತ್ತು. ಆದರೆ, ಮಲೆನಾಡಿನ ಸಂಬಂಧವೇ ಇಲ್ಲದ ದೇವದೂತರಿಂದ ಇಂದು ಶಾಲೆಗೆ ಹೊಸ ರೂಪ ಸಿಕ್ಕಿದೆ ಗೋಡೆ-ಕಿಟಕಿಗಳಿಗೆ ಬದುಕುವ ಚೈತನ್ಯ ತಂದಿದೆ. ಮಕ್ಕಳ ಮೊಗದಲ್ಲಿ ಮಂದಹಾಸ ಮೂಡಿದೆ. ಇಷ್ಟಕ್ಕೆಲ್ಲಾ ಕಾರಣವಾಗಿದ್ದು ಸರ್ಕಾರವಲ್ಲ. ಅದೊಂದು ಸಹೃದಯಿಗಳ ಸಂಸ್ಥೆ.

ಹೌದು, ದೇಶದಲ್ಲಿ ದುಡ್ಡು ಮಾಡೋದಕ್ಕೆ ಹುಟ್ಟಿದ ಎನ್.ಜಿ.ಓಗಳು ಇವೆ. ಸೇವೆಗೆಂದೇ ಪ್ರಾಮಾಣಿಕವಾಗಿ ಜನ್ಮ ತಾಳಿದ ಎನ್.ಜಿ.ಓ.ಗಳು ಇವೆ. ಅದರಲ್ಲಿ ಯೂತ್ಸ್ ಫಾರ್ ಸೇವ ಎಂಬ ಎನ್.ಜಿ.ಓ. ಕೂಡ ಒಂದು. ಈ ಸಂಸ್ಥೆಯಿಂದ ಇಂದು ಶಾಲೆಗೆ ಹೊಸ ರೂಪ ಸಿಕ್ಕಿದೆ. ಗ್ರಾಮಸ್ಥರು ಇದು ನಮ್ಮ ಶಾಲೆಯ ಎಂದು ಮೂಗಿನ ಮೇಲೆ ಬೆರಳಿಡುವಷ್ಟರ ಮಟ್ಟಿಗೆ ಬದಲಾವಣೆಯಾಗಿದೆ. ಕಾರಣ ಯೂತ್ ಫಾರ್ ಸೇವ ಹಾಗೂ ರೆಫನೇಟಿವ್ ಸಾಫ್ಟ್ವೇರ್ ಇಂಜಿನಿಯರ್ಗಳಿಂದ. ವರ್ಗಾವಣೆಯಾಗಿ ಶಾಲೆಗೆ ಬಂದ ಅನಂತ ಎಂಬ ಮುಖ್ಯಶಿಕ್ಷಕನ ಪರಿಶ್ರಮವೂ ಇದರಲ್ಲಿ ಬಹಳಷ್ಟಿದೆ. ಯಾಕೆಂದರೆ ಶಾಲೆಯ ಸ್ಥಿತಿ ಕಂಡು ಸ್ನೇಹಿತರ ಮೂಲಕ ಎನ್.ಜಿ.ಓ. ಗಮನಕ್ಕೆ ತಂದಿದ್ದರು. ವಿಷಯ ತಿಳಿದ ಯೂತ್ಸ್ ಫಾರ್ ಸೇವ ಎನ್.ಜಿ.ಓ ಹಾಗೂ ರೆಫನೇಟಿವ್ ಕಂಪನಿಯ ಇಂಜಿನಿಯರ್ಗಳು ನೋಡ-ನೋಡುತ್ತಿದ್ದಂತೆ ಶಾಲೆಯ ಚಿತ್ರಣವನ್ನು ಬದಲಿಸಿದ್ದಾರೆ.

ಎಂ.ಎನ್.ಸಿ. ಕಂಪನಿಯಲ್ಲಿ ಕೆಲಸ ಮಾಡೋರು ವೀಕ್ ಎಂಡ್ ಬರೋದನ್ನೇ ಕಾಯುತ್ತಿರುತ್ತಾರೆ. ಹುಡುಗರು ಹೊಟ್ಟೆ ತುಂಬಾ ಕುಡಿದು ಮಲಗಿದರೆ, ಹುಡುಗಿಯರು ಬಾಯ್ ಫ್ರೆಂಡ್ ಜೊತೆ ಟೂರ್-ಪಿಕ್ನಿಕ್, ಸಿನಿಮಾ-ಮಾಲ್ ಅಂತ ಸುತ್ತುತ್ತಿರುತ್ತಾರೆ. ಆದರೆ ರೆಫನೇಟಿವ್ ಕಂಪನಿಯ ಗಲ್ಸ್ ಅಂಡ್ ಬಾಯ್ಸ್ ವೀಕ್ ಎಂಡ್ನಲ್ಲಿ ಸರ್ಕಾರಿ ಶಾಲೆ ಉಳಿಸೋ ಕೆಲಸ ಮಾಡುತ್ತಿರುವುದು ನಿಜಕ್ಕೂ ಉಳಿದವರಿಗೆ ಮಾದರಿ. ಲಕ್ಷಾಂತರ ರೂಪಾಯಿ ಸಂಬಳ ಪಡೆಯುತ್ತೇವೆಂಬ ಒಂದಷ್ಟು ಅಹಂಕಾರ, ದುರಂಕಾರವಿಲ್ಲದೆ ಹಳ್ಳಿಗರ ಜೊತೆ ಸೇರಿ ಸಂಬಂಧವೇ ಇಲ್ಲದ ಶಾಲೆಗೆ ಸುಣ್ಣ-ಬಣ್ಣ ಹೊಡೆದ ಆ ಸಹೃದಯಿಗಳ ಕೈಗಳಿಗೆ ಹ್ಯಾಟ್ಸಾಫ್. 28 ಜನರ ತಂಡ ವೀಕ್ ಎಂಡ್ನಲ್ಲಿ ವಾಲೆಂಟಿಯರ್ ಆಗಿ ಬಂದು ಶಾಲೆಗೊಂದು ರೂಪ ಕೊಟ್ಟು ಮಲೆನಾಡಿಗರಿಗೆ ಯುಗಾದಿಯ ಗಿಫ್ಟ್ ಕೊಟ್ಟಿದ್ದಾರೆ.

Raghavendra kesavalalu

ತಮ್ಮ ಕೆಲಸದ ಕುರಿತು ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಇಂಜಿನಿಯರ್ ತಾನ್ಯಾ ಹಾಲೂರು  ಅವರು, ನಾವು ಕೂಡ ಕನ್ನಡ ಶಾಲೆಯಲ್ಲೇ ಕಲಿತೋರು. ಕನ್ನಡ ನಮ್ಮ ಹೆಮ್ಮೆ. ಇದು ನಮ್ಮ ಶಾಲೆ ಆಗದಿರಬಹುದು. ಆದರೆ, ನಮ್ಮಂಥವರ ಶಾಲೆ. ಇವತ್ತು ನಾವೆಲ್ಲಾ ಎಸಿ ರೂಂನಲ್ಲಿ ಕೂತು ಕೆಲಸ ಮಾಡುತ್ತೇವೆ. ಆದರೆ, ಒಂದು ದಿನ ಇಂತಹದ್ದೆ ಶಾಲೆಯಲ್ಲಿ ಪಾಠ ಕೇಳಿ ಬೆಳೆದಿದ್ದೇವೆ. ಮಕ್ಕಳ ಶಾಲಾ ಕಟ್ಟಡ ನೋಡಿದರೆ ಬೇಜಾರುಗುತ್ತದೆ. ನಾವು ಅನುಭವಿಸಿದ್ದನ್ನು ಮಕ್ಕಳು ಅನುಭವಿಸುವುದು ಬೇಡ. ಅವರು ನಮ್ಮಂತೆ ಆಗುವುದು ಬೇಡ. ನಮ್ಮ ಕೈಲಾದ ಸಹಾಯ ಮಾಡಿದ್ದೇವೆ. ಮುಂದಕ್ಕೂ ಮಾಡುತ್ತೇವೆ. ಅವರಿಗೆ ಸೂಕ್ತ ರೀತಿಯ ಸೌಲಭ್ಯ ಸಿಕ್ಕರೆ ಎತ್ತರಕ್ಕೆ ಬೆಳೆಯುತ್ತಾರೆ. ನಮ್ಮ ಕೆಲಸಕ್ಕೆ ಅದೇ ಪ್ರತಿಫಲ. ಹೆಸರಿಗಾಗಿ ನಾವು ಈ ಕೆಲಸ ಮಾಡುತ್ತಿಲ್ಲ ಎಂದು ಸರ್ಕಾರಿ ಶಾಲೆಗಳ ಸ್ಥಿತಿ ಬಗ್ಗೆ ನೊಂದ ನುಡಿಯನ್ನಾಡಿದರು.

ಇನ್ನು, ಯೂತ್ಸ್ ಫಾರ್ ಸೇವ, ಎನ್.ಜಿ.ಓ. ಸದಸ್ಯ ಭಾಸ್ಕರ ಅವರು ಮಾತನಾಡಿ, ಮಲೆನಾಡಿಗರ ಮನಸ್ಸಿಗೆ ಸೋತಿದ್ದಾರೆ. ನೆರವಿಗೆ ಫಿದಾ ಆಗಿದ್ದಾರೆ. ಅದರಲ್ಲೂ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬ್ರಿಜೇಶ್ ಕಡಿದಾಳ್ ಅವರನ್ನು ಹಾಡಿ ಹೋಗಳಿದ್ದಾರೆ. ಅಷ್ಟು ದೂರದಿಂದ ಬಂದಿದ್ದೇವೆ. ಗ್ರಾಮಸ್ಥರ ಸಹಕಾರ ಅದ್ಭುತವಾದದ್ದು. ನಮ್ಮ ಕೆಲಸಕ್ಕೆ ಅವರೇ ಬೆನ್ನೆಲುಬು. ಸ್ಥಳಿಯರ ಅತ್ಯುತ್ತಮ ಸಹಕಾರದಿಂದ ನಮ್ಮ ಕೆಲಸ ಮತ್ತಷ್ಟು ಪಕ್ವವಾಗಿದೆ ಎಂದರು. ನಮ್ಮ ಸಂಸ್ಥೆಯ ಹೆಸರಲ್ಲೇ ಸೇವೆ ಇದೆ. ನಾವು ಅದಕ್ಕೆ ಮಾಡುತ್ತಿರುವುದು. ಸಾಕಷ್ಟು ಶಾಲೆಗೆ ಸಹಕಾರ ನೀಡಿದ್ದೇವೆ. ಮುಂದಕ್ಕೂ ನೀಡುತ್ತೇವೆ. ಇದು ಇಲ್ಲಿ ಐದನೇ ಶಾಲೆ. ಮುಂದಿನ ದಿನಗಳಲ್ಲಿ ದಾರದಹಳ್ಳಿಯ ಪ್ರಾಥಮಿಕ ಶಾಲೆಗೂ ಹೊಸ ರೂಪ ಕೊಡುತ್ತೇವೆ ಎಂದು ಮುಂದಿನ ಪ್ಲ್ಯಾನನ್ನು ಕೂಡ ಫಸ್ಟ್ ಸುದ್ದಿಯೊಂದಿಗೆ ಹಂಚಿಕೊಂಡಿದ್ದಾರೆ.

ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಂಜನ್ ಅಜಿತ್ ಕುಮಾರ್ ಅವರು ಮಾತನಾಡಿ, ವೀಕೆಂಡ್ನಲ್ಲಿ ಸಾಫ್ಟ್ವೇರ್ ಸಂಸ್ಥೆಯವರು ಮೋಜು-ಮಸ್ತಿಯಲ್ಲೇ ಕಾಲ ಕಳೆಯುತ್ತಾರೆ. ಆದರೆ, ಸಂಬಂಧವೇ ಇಲ್ಲದ ಶಾಲೆಗೆ ಹೀಗೆ ಹೊಸ ರೂಪ ಕೊಡುತ್ತಿರುವುದು ಅವರ ಕನ್ನಡ ಪ್ರೇಮ ಹಾಗೂ ಸರ್ಕಾರಿ ಶಾಲೆಯ ಪ್ರೀತಿ ಅನಾವರಣಗೊಂಡಿದೆ. ಎಲ್ಲಿಂದಲೋ ಬಂದು 4-5 ಲಕ್ಷ ವೆಚ್ಚ ಮಾಡಿ, ಶಾಲೆಗೆ ಸುಣ್ಣ-ಬಣ್ಣ ಬಳಿದು, ಮಕ್ಕಳಿಗೆ ಕಂಪ್ಯೂಟರ್ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಿದ್ದಾರೆ. ಮಕ್ಕಳು ಇದರ ಸುದುಪಯೋಗ ಮಾಡಿಕೊಂಡು ದೊಡ್ಡ ಮನುಷ್ಯರಾಗಲಿ ಎಂದು ಆಶಿಸಿ, ಎನ್.ಜಿ.ಓ. ಹಾಗೂ ಇಂಜಿನಿಯರ್ಗಳ ಕೆಲಸ ನಮಗೆ ಸಂತೋಷ ತಂದಿದೆ. ಇಂತಹಾ ಸಂಘ-ಸಂಸ್ಥೆಗಳು ಮತ್ತಷ್ಟ ಹುಟ್ಟಬೇಕು ಎಂದು ಬಯಸಿದರು.

ಇನ್ನು ಈ ಗ್ರಾಮವನ್ನು ಸಂಸದೆ ಶೋಭಾ ಕರಂದ್ಲಾಜೆಯವರು ಪ್ರಧಾನಿ ಮೋದಿ ಕಸಸಿನ ಯೋಜನೆ ಆದರ್ಶ ಗ್ರಾಮ ಯೋಜನೆಯಡಿ ದತ್ತು ಪಡೆದ ಗ್ರಾಮ. ಅವರು ಇದನ್ನು ದತ್ತು ಪಡೆದ ಮೇಲೆ ಮೊದಲು ಇದ್ದ ಸೌಲಭ್ಯಗಳೇ ಕಣ್ಮರೆಯಾಗಿವೆ. ಈ ಶಾಲೆಗೆ ಸರ್ಕಾರದಿಂದಲೂ ಯಾವ ಸೌಲಭ್ಯವೂ ಸಿಗಲಿಲ್ಲ. ಆದರ್ಶ ಗ್ರಾಮದಡಿ ಸಂಸದೆ ಮೇಡಂ ಕೂಡ ಏನು ಮಾಡಲಿಲ್ಲ. ಸಂಬಂಧವೇ ಇಲ್ಲದ ಸಹೃದಯಿಗಳ ದೊಡ್ಡತನಕ್ಕೆ ಮಲೆನಾಡಿನ ನಮ್ಮೂರು ಶಾಲೆ ಹೊಸ ರೂಪ-ಚೈತನ್ಯ ಬಂದಿದೆ ಎಂದು ದಾರದಹಳ್ಳಿ ಜನ ಯೂತ್ಸ್ ಫಾರ್ ಸೇವ ಎನ್.ಜಿ.ಓ ಹಾಗೂ ರೇಫನೇಟಿವ್ ಸಂಸ್ಥೆ ಇಂಜಿನಿಯರ್ ಗಳಿಗೆ ಋಣಿ ಎಂದಿದ್ದಾರೆ.