ಚಿಕ್ಕಮಗಳೂರು – ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಒಂದಲ್ಲ ಒಂದು ಕಾರಣದಿಂದಾಗಿ ಸುದ್ದಿಯಾಗ್ತಿದ್ದಾರೆ. ಇವರು ಮಾಜಿ ಶಾಸಕರಾಗಿದ್ದಾಗ್ಲೂ ಸುದ್ದಿಯಾಗ್ತಿದ್ರು, ಈಗ ಹಾಲಿ ಶಾಸಕರಾಗಿಯೂ ಸುದ್ದಿಯಾಗ್ತಿದ್ದಾರೆ. ಆದರೆ ಕಾರಣಗಳು ಬೇರೆ-ಬೇರೆಯಷ್ಟೆ. ನಿನ್ನೆ ಮೂಡಿಗೆರೆ ತಾಲೂಕಿನ ಬಡವನದಿಡ್ಡೆ ಗ್ರಾಮದಲ್ಲಿ ನಡೆದ ಗ್ರಾಮೀಣ ಕ್ರೀಡಾಕೂಟದ ಉದ್ಘಾಟನೆಗೆ ಹೋಗಿದ್ದ ಶಾಸಕ ಕುಮಾರಸ್ವಾಮಿ ಉದ್ಘಾಟನೆ ಬಳಿಕ ತಾನೂ ಓರ್ವ ಸ್ಫರ್ಧಾಳು ಎಂದು ಕೆಸರುಗದ್ದೆ ಓಟಕ್ಕೆ ನಿಂತಿದ್ದಾರೆ. ಮಕ್ಕಳು ಹಾಗೂ ದೊಡ್ಡವರು ಇಬ್ಬರ ಜೊತೆಗೂ ಸ್ಪರ್ಧೆಗೆ ನಿಂತ ಕುಮಾರಸ್ವಾಮಿ ನಾನು ಜನರ ಶಾಸಕ ಎಂದು ಮಕ್ಕಳೊಂದಿಗೆ ಮಕ್ಕಳಾಗಿ ಕೆಸರುಗದ್ದೆಯಲ್ಲಿ ಎದ್ದು, ಬಿದ್ದು, ಓಡಿ ಸಂಭ್ರಮಿಸಿದ್ದಾರೆ. ಕೆಸರುಗದ್ದೆಯಲ್ಲಿ ಶಾಸಕರ ಓಟ ಕಂಡ ಸ್ಥಳಿಯರು ಕೂಡ ಅವರ ಜೊತೆ ಓಡಿದ್ದಾರೆ. ಶಾಸಕನೋರ್ವ ಶಾಸಕತ್ವದ ಹಮ್ಮು-ಬಿಮ್ಮನ್ನ ಮರೆತು ಗ್ರಾಮಸ್ಥರ ಜೊತೆ ಸಂಭ್ರಮಿಸಿರೋದ್ನ ಕಂಡ ಸ್ಥಳಿಯರು ಶಾಸಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.