ಮೂಡಿಗೆರೆ : ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯನ್ನು ಆಟೋದಿಂದ ತಳ್ಳಿ ಕೊಂದ ಪಾಗಲ್ ಪ್ರೇಮಿ…

4165

ಮೂಡಿಗೆರೆ : ಪ್ರೀತ್ಸೆ…ಪ್ರೀತ್ಸೆ ಅಂತ ಪ್ರಾಣ ತಿಂತಿದ್ದ ಪಾಗಲ್ ಪ್ರೇಮಿಯೊಬ್ಬ ಪ್ರೀತಿ ನಿರಾಕರಿಸಿದ್ದಕ್ಕೆ ಮನನೊಂದು ಪ್ರಿಯಕರನೆ ಪ್ರಿಯತಮೆಯನ್ನು ಕೊಲೆ ಮಾಡಿರುವ ಘಟನೆ ತಾಲೂಕಿನ ಬಸವನಹಳ್ಳಿ ಬಳಿ ನಡೆದಿದೆ. ಮೃತ ಯುವತಿಯನ್ನು 19 ವರ್ಷದ ರಶ್ಮಿ ಎಂದು ಗುರುತಿಸಲಾಗಿದೆ. ಕಾಲೇಜಿನಿಂದ ಬರುತ್ತಾ ರಶ್ಮಿಯನ್ನು ಬಲವಂತವಾಗಿ ಆಟೋ ಹತ್ತಿಸಿಕೊಂಡು ಪಾಗಲ್ ಪ್ರೇಮಿ ಚೇತನ್ ಆಟೋದಿಂದ ತಳ್ಳಿ ಕೊಲೆ ಮಾಡಿದ್ದಾನೆಂದು ರಶ್ಮಿ ಪೋಷಕರು ಆರೋಪಿಸಿ ಮೂಡಿಗೆರೆ ಠಾಣೆಯಲ್ಲಿ ದೂರು ನೀಡಿದ್ದಾರೆ.

ಘಟನೆಯ ವಿವರ : ಮೃತ ರಶ್ಮಿ ಮೂಡಿಗೆರೆ ತಾಲೂಕಿನ ಬಾನಳ್ಳಿ ನಿವಾಸಿ. ಮೂಡಿಗೆರೆಯ ಡಿ.ಎಸ್.ಬಿ.ಜಿ. ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದಳು. ಆದರೆ, ಮೂಡಿಗೆರೆಯ ಆಟೋ ಚಾಲಕ ಚೇತನ್ ರಶ್ಮಿ ಹಿಂದೆ ಬಿದ್ದು ಪ್ರೀತ್ಸೆ ಅಂತ ಪೀಡಿಸುತ್ತಿದ್ದ ಎನ್ನಲಾಗಿದ್ದು, ರಶ್ಮಿ ನಾನು ಓದಬೇಕು ಎಂದು ಚೇತನ್ ಪ್ರೀತಿಯನ್ನು ಸಂಪೂರ್ಣ ನಿರಾಕರಿಸಿದ್ದಳು. ಆದರೆ ಆಟೋ ಚಾಲಕ ಚೇತನ್ ರಶ್ಮಿಯ ಹಿಂದೆ ಬಿದ್ದು ಪ್ರೀತ್ಸು ಅಂತ ಪೀಡಿಸುತ್ತಿದ್ದದ್ದನ್ನು ಬಿಟ್ಟಿರಲಿಲ್ಲ. ದಾರಿಯಲ್ಲಿ ಹೋಗ್ತಾ-ಬರ್ತಾ ಆತ ಹಿಂಸೆ ಕೊಡುತ್ತಿದ್ದಿದ್ದರಿಂದ ರಶ್ಮಿ ಆತನ ಹಿಂಸೆಯನ್ನು ತಾಳಲಾರದೆ ಹೆತ್ತವರಿಗೂ ವಿಷಯ ಮುಟ್ಟಿಸಿದ್ದಳು. ರಶ್ಮಿ ಪೋಷಕರು 6 ತಿಂಗಳ ಹಿಂದೆ ಬಣಕಲ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಚೇತನ್ನನ್ನು ಠಾಣೆಗೆ ಕರೆಸಿ ಬುದ್ಧಿವಾದ ಹೇಳಿ, ಆಕೆ ಹಿಂದೆ ಹೋಗುವುದಿಲ್ಲ ಎಂದು ಮುಚ್ಚಳಿಕೆ ಬರೆಸಿಕೊಂಡು ಕಳಿಸಿಕೊಟ್ಟಿದ್ದರು. ಆದರು ಆರೋಪಿ ಚೇತನ್ ರಶ್ಮಿ ಹಿಂದೆ ಬಿದ್ದಿದ್ದ. ಪ್ರತಿದಿನ ರಶ್ಮಿ ಕಾಲೇಜಿಗೆ ಹೋಗುವಾಗ, ಬರುವಾಗ ದಾರಿಯಲ್ಲಿ ಅಡ್ಡಗಟ್ಟಿ ಪ್ರೀತ್ಸೆ ಎಂದು ಪೀಡಿಸುತ್ತಿದ್ದ.

ನಿನ್ನೆಯೂ ಎಂದಿನಂತೆ ರಶ್ಮಿ ಕಾಲೇಜು ಮುಗಿಸಿ ಬರುವಾಗ ಆಕೆಯನ್ನ ಬಲವಂತವಾಗಿ ಮೂಡಿಗೆರೆಯ ಶ್ವೇತಾ ಮೆಡಿಕಲ್ ಸಮೀಪ ಆಟೋ ಹತ್ತಿಸಿಕೊಂಡಿದ್ದಾನೆ. ಮತ್ತೆ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳುವಂತೆ ಪೀಡಿಸಿದ್ದ. ಆಗ ರಶ್ಮಿ ಖಡಾಖಂಡಿತವಾಗಿ ಅವನ ಪ್ರೀತಿಯನ್ನು ನಿರಾಕರಿಸಿದ್ದಳು. ಇದರಿಂದ ಕೋಪಿತನಾದ ಆರೋಪಿ ಚೇತನ್ ಆಟೋ ಬಸವನಹಳ್ಳಿ ಸಮೀಪ ಬರುತ್ತಿದ್ದಂತೆ ಆಕೆಯನ್ನು ಆಟೋದಿಂದ ತಳ್ಳಿ ಕೆಳಗೆ ಬೀಳಿಸಿದ್ದಾನೆ. ಬಳಿಕ ಅವನೇ ಆಸ್ಪತ್ರೆಗೆ ಸೇರಿಸಿ ರಶ್ಮಿ ಹೆತ್ತವರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ. ರಶ್ಮಿ ಬಿದ್ದು ಪೆಟ್ಟು ಮಾಡಿಕೊಂಡಿದ್ದಾಳೆ ಎಂದು ಹೇಳಿ, ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕರೆದುಕೊಂಡು ಹೋಗುತ್ತಿದ್ದೇನೆ ಎಂದು ಹೇಳಿದ್ದಾನೆ. ಇದಾದ ಬಳಿಕ ಆರೋಪಿ ಚೇತನ್ ಬೇಲೂರಿನಲ್ಲಿರುವ ತನ್ನ ಸಂಬಂಧಿಗೆ ವಿಷಯ ತಿಳಿಸಿ ಬೇಲೂರು ಆಸ್ಪತ್ರೆಗೆ ಸೇರಿಸಿದ್ದಾನೆ. ಆದರೆ ಚಿಕಿತ್ಸೆ ಫಲಿಸದೆ ರಶ್ಮಿ ಸಾವನ್ನಪ್ಪಿದ್ದಾಳೆ. ತನ್ನ ಮಗಳು ಆತನ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಅವನೇ ಆಟೋದಿಂದ ತಳ್ಳಿ ಕೊಲೆ ಮಾಡಿದ್ದಾನೆ, ಅವನಿಗೆ ಕಠಿಣ ಶಿಕ್ಷೆಯಾಗಬೇಕೆಂದು ದೂರಿರುವ ರಶ್ಮಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಇದೀಗ, ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಚೇತನ್ ಪೊಲೀಸರ ವಶದಲ್ಲಿದ್ದಾನೆ.