ಕೊಟ್ಟಿಗೆಹಾರ : ಬಣಕಲ್‍ನ ಮುಖ್ಯರಸ್ತೆಯಲ್ಲಿ ಕ್ರೇಟ್‍ನಲ್ಲಿ ಜೋಡಿಸಿ ಇಟ್ಟಿದ್ದ ನಂದಿನಿ ಹಾಲಿನ ಪ್ಯಾಕೇಟನ್ನು ಕದ್ದೊಯ್ದ ಘಟನೆ ಇಂದು ಬೆಳಿಗ್ಗಿನ ಜಾವ ನಡೆದಿದೆ.
ಬಣಕಲ್ ಮುಖ್ಯ ರಸ್ತೆಯಲ್ಲಿರುವ ಆಲಂ ಸ್ಟೋರ್ ಅಂಗಡಿಯ ಮುಂಭಾಗ ಜೋಡಿಸಿದ್ದ ಅರ್ದ ಲೀಟರಿನ ಮೂರು ಹಾಲಿನ ಪ್ಯಾಕೇಟ್‍ನ್ನು ಕಳ್ಳರು ಹೊತ್ತೊಯ್ದಿದ್ದು ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಹಾಸನ ನಂದಿನಿ ಹಾಲಿನ ಡೈರಿಯಿಂದ ರಾತ್ರಿ 12 ಗಂಟೆ ಹಾಲಿನ ವಾಹನ ಬಣಕಲ್ ಸುತ್ತಮುತ್ತ ಕ್ರೇಟ್‍ನಲ್ಲಿ ಹಾಲನ್ನು ಇಳಿಸಿ ಹೋಗುತ್ತಾರೆ. ಮಂಗಳವಾರ 3 ಗಂಟೆ ಸುಮಾರಿಗೆ ಮಂಗಳೂರು ಕಡೆಗೆ ಹೋಗುವ ಕಾರೊಂದು ಅಂಗಡಿ ಎದುರು ನಿಂತಿದ್ದು ಹಾಲಿನ ಪ್ಯಾಕೆಟ್ ಜೋಡಿಸಿದ ಕ್ರೇಟ್‍ನ ಬಳಿ ಕಾರನ್ನು ತಂದು ಕಾರಿನಿಂದ ಇಳಿಯದೇ ಕೈಚಾಚಿ ಹಾಲಿನ ಪ್ಯಾಕೇಟ್‍ಗಳನ್ನು ತೆಗೆಯುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕೆಲ ದಿನಗಳ ಹಿಂದೆ ಕೊಟ್ಟಿಗೆಹಾರದಲ್ಲಿ ಸಿಲಂ ಎಂಬುವವರ ಅಂಗಡಿ ಮುಂದೆ ಕ್ರೇಟ್‍ನಲ್ಲಿದ್ದ ಸುಮಾರು 12ಲೀಟರ್ ಹಾಲಿನ ಪ್ಯಾಕೆಟ್‍ಗಳನ್ನು ಕಳ್ಳರು ಕದ್ದೊಯ್ದಿದ್ದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬಣಕಲ್ ಪಿಎಸ್‍ಐ ಶ್ರೀನಾಥ್ ರೆಡ್ಡಿ, ಬಣಕಲ್‍ನಲ್ಲಿ ಹಾಲು ಕಳವು ಮಾಡಿದವರ ಮಾಹಿತಿ ಲಭ್ಯವಾಗಿದ್ದು ಚಿತ್ರದುರ್ಗ ಮೂಲದವರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದಿದೆ. ಬಣಕಲ್ ಕೊಟ್ಟಿಗೆಹಾರ ಮೂಲಕ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು ದಿನನಿತ್ಯ ನೂರಾರು ವಾಹನಗಳು ಈ ಮಾರ್ಗವಾಗಿ ಸಂಚರಿಸುತ್ತಿರುತ್ತದೆ. ಹಾಲಿನ ಪ್ಯಾಕೇಟ್‍ಗಳನ್ನು ಮಾರಾಟ ಮಾಡುವ ಅಂಗಡಿಯವರು ಹಾಲಿನ ವಾಹನದಿಂದ ಹಾಲಿನ ಪ್ಯಾಕೇಟ್‍ಗಳನ್ನು ಇಳಿಸಿದೊಡನೆ ರಸ್ತೆ ಬದಿ ಬಿಡದೇ ಅಂಗಡಿ ಒಳಗೆ ಇಟ್ಟುಕೊಳ್ಳಬೇಕು ಎಂದು ತಿಳಿಸಿದ್ದಾರೆ.










