ರಾಮನಹಳ್ಳಿಯ ಮಸೀದಿ ಮುಂಭಾಗ ಮದ್ಯದಂಗಡಿ ತೆರೆಯಲು ನೀಡಿರುವ ಪರವಾನಗಿಯನ್ನು ತಕ್ಷಣ ರದ್ದುಪಡಿಸುವಂತೆ ಮುಸ್ಲಿಂ ಸಮುದಾಯದವರ ಪ್ರತಿಭಟನೆ…

246
firstsuddi

ಚಿಕ್ಕಮಗಳೂರು:ನಗರದ ರಾಮನಹಳ್ಳಿಯ ಮಸೀದಿ ಮುಂಭಾಗ ಮದ್ಯದಂಗಡಿ ತೆರೆಯಲು ನೀಡಿರುವ ಪರವಾನಗಿಯನ್ನು ತಕ್ಷಣ ರದ್ದುಪಡಿಸುವಂತೆ ಒತ್ತಾಯಿಸಿ ಮುಸ್ಲಿಂ ಸಮುದಾಯದವರು ಆಜಾದ್ ಪಾರ್ಕ್ ವೃತ್ತದ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಮಧ್ಯಾಹ್ನದ ನಮಾಜ್ ನಂತರ ಆಜಾದ್ ಪಾರ್ಕ್ ವೃತ್ತದ ಬಳಿ ಜಮಾಯಿಸಿದ ಸಮುದಾಯದ ನೂರಾರು ಜನ ಬಾರ್ ಮತ್ತು ರೆಸ್ಟೋರೆಂಟ್‍ಗೆ ಪರವಾನಗಿ ನೀಡಿರುವುದರ ವಿರುದ್ದ ತೀವ್ರ ಆಕ್ರೋಶ, ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಸ್ಲಿಂ ಸಮುದಾಯದ ಧರ್ಮಗುರು ಮುಫ್ತೀ ತೌಶೀರ್ ಅಹಮದ್ ಸಾಬ್ ಬಾರ್ ಮತ್ತು ರೆಸ್ಟೋರೆಂಟ್ ಆರಂಭವಾಗಲಿರುವ ರಾಮನಹಳ್ಳಿ ರಸ್ತೆಯಲ್ಲಿ ತಮ್ಮ ಸಮುದಾಯದ ಸ್ಮಶಾನ, ಮಸೀದಿ, ಶಿಕ್ಷಕರ ತರಬೇತಿ ಕೇಂದ್ರ, ಬಾಲಕಿಯರ ಹಾಸ್ಟೆಲ್ ಇದೆ, ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ನೂರಾರು ಜನ ಆ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಾರೆ, ಇಂತಹ ಸ್ಥಳದಲ್ಲಿ ಬಾರ್ ತೆರೆಯುವುದರಿಂದ ನಿವಾಸಿಗಳ ನೆಮ್ಮದಿ ಹಾಳಾಗುತ್ತದೆ ಎಂದು ಹೇಳಿದರು.
ಯಾವುದೇ ಕಾರಣಕ್ಕೂ ಆ ಜಾಗದಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದ ಅವರು ಅಂಗಡಿಯನ್ನು ತೆರೆದಲ್ಲಿ ಮುಂದಾಗುವ ಅನಾಹುತಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ, ಅಬಕಾರಿ ಇಲಾಖೆ, ಪೋಲೀಸ್ ಇಲಾಖೆ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಅತೀಕ್ ಖೈಸರ್ ಮಾತನಾಡಿ ಬಾರ್ ಮತ್ತು ರೆಸ್ಟೋರೆಂಟ್‍ಗೆ ಪರವಾನಗಿ ನೀಡದಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸಮುದಾಯದಿಂದ ಹಲವು ಬಾರಿ ಮನವಿ ಮಾಡಲಾಗಿದ್ದರೂ ಅದನ್ನು ನಿರ್ಲಕ್ಷಿಸಿ ಲಂಚದ ಆಸೆಗಾಗಿ ಅನುಮತಿ ನೀಡಿದ್ದಾರೆ ಎಂದು ಆರೋಪಿಸಿದರು.
ಮಸೀದಿ, ಬಾಲಕಿಯರ ಹಾಸ್ಟೆಲ್ ಇರುವ ಜಾಗದಲ್ಲಿ ಮದ್ಯದಂಗಡಿ ತೆರೆಯಲು ನಿಷೇಧವಿದ್ದರೂ ಸಹ ನಿಯಮಗಳನ್ನು ಗಾಳಿಗೆ ತೂರಿ ಅಧಿಕಾರಿಗಳು ಪರವಾನಗಿ ನೀಡಿದ್ದಾರೆ ಎಂದು ದೂರಿದರು.
ಪ್ರತಿಭಟನೆ ನಂತರ ಜಿಲ್ಲಾಧಿಕಾರಿ ಕಛೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು, ಜಾಮಿಯ ಮಸೀದಿ ಧರ್ಮಗುರು ರಾಹೀಲ್ ಕಾಶ್ಮೀ ಸಾಬ್, ಅಧ್ಯಕ್ಷ ನಜೀರ್ ಅಹಮದ್, ಕಾರ್ಯದರ್ಶಿ ಅಫ್ಜಲ್ ಖಾನ್, ಜಂಟಿ ಕಾರ್ಯದರ್ಶಿ ಜುಬೇದುಲ್ಲಾ ಶರೀಫ್, ಉಪಾಧ್ಯಕ್ಷ ಅಬ್ದುಲ್ ಕರೀಂ, ಮುಖಂಡರಾದ ರಾಹೀಲ್ ಷರೀಫ್, ಮಹಮದ್ ಇಬ್ರಾಹಿಂ, ಷರೀಫ್ ಮುದಸೀರ್ ತಬರೇಜ್ó ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.