ನಮ್ಮದು ಕೃಷಿ ಕುಟುಂಬ, ಮೂಲ ವೃತ್ತಿ ಬೇಸಾಯ : ಎಚ್.ಡಿ.ಕುಮಾರಸ್ವಾಮಿ.

226

ರಾಮನಗರ: ನಮ್ಮದು ಕೃಷಿ ಕುಟುಂಬ, ಮೂಲ ವೃತ್ತಿ ಬೇಸಾಯ ಆಗಿರುವುದರಿಂದ ನನ್ನ ತಂದೆಯವರು ನನಗೆ ಕೃಷಿ ಮಾಡುವುದನ್ನು ಕಲಿಸಿದ್ದಾರೆ. ಹೀಗಾಗಿ ನನ್ನ ತೋಟದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದೇನೆ ಎಂದು ಮಾಜಿ ಮುಖುಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಬಿಡದಿಯ ಕೇತಗಾನಹಳ್ಳಿ ತೋಟದ ಮನೆಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ನಾನು ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದರೂ ಸಹ ಕೈಗಾರಿಕೆಗಳು ಹಾಗೂ ಶಿಕ್ಷಣ ಸಂಸ್ಥೆಗಳನ್ನು ತೆರೆಯಲಿಲ್ಲ. ನಮ್ಮದು ಕೃಷಿ ಕುಟುಂಬ, ಮೂಲ ವೃತ್ತಿ ಬೇಸಾಯ ಆಗಿರುವುದರಿಂದ ನನ್ನ ತೋಟದಲ್ಲಿ ಕೃಷಿ ಮಾಡುತ್ತಿದ್ದೇನೆ. ಜತೆಗೆ ರಾಜಕೀಯಕ್ಕಾಗಿ ಸಂಘಟನೆಗೆ ಏನು ಮಾಡಬೇಕೊ ಅದನ್ನು ಮಾಡುತ್ತಿದ್ದೇನೆ. ಕಾರ್ಯಕರ್ತರನ್ನು ಭೇಟಿ ಮಾಡಿ ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ಬೇರೆಯವರು ಏನು ಹೇಳುತ್ತಾರೆ, ಏನೇನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ನನಗೆ ಆಸಕ್ತಿ ಇಲ್ಲ. ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

ನಾನು ಅಧಿಕಾರದಲ್ಲಿರಲಿ, ಇಲ್ಲದಿರಲಿ ಎಲ್ಲರಿಗೂ ನನ್ನ ಮೇಲೆಯೇ ಕಣ್ಣು, ಕೇಂದ್ರ ಸರ್ಕಾರವಾಗಲಿ ಅಥವಾ ಇಡಿ, ಐಟಿ ಸಂಸ್ಥೆಗಳು ನನ್ನ ಕೈಯಲ್ಲಿದೆಯಾ? ಹೀಗಿದ್ದರೂ ಯಾರಿಗೆ ಏನೇ ಆದರೂ ಅದಕ್ಕೆಲ್ಲ ನಾನೇ ಕಾರಣ ಎನ್ನುವ ಭಾವನೆ ಕೆಲವರಿಗೆ ಬಂದು ಬಿಟ್ಟಿದೆ ಎಂದು ಕಿಡಿಕಾರಿದರು.