ಚಿಕ್ಕಮಗಳೂರು: ಪೋಷಕರು ಮತ್ತು ಶಿಕ್ಷಕರು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದರ ಜೊತೆಗೆ ಅವರನ್ನು ಉತ್ತಮ ನಾಗರೀಕರನ್ನಾಗಿಯೂ ರೂಪಿಸಬೇಕು ಎಂದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಜಿಲ್ಲಾ ಸಂಚಾಲಕಿ ಬಿ.ಕೆ.ಭಾಗ್ಯ ಸಲಹೆ ಮಾಡಿದರು.ನಗರದ ಕುವೆಂಪು ಕಲಾ ಮಂದಿರದಲ್ಲಿ ಗುರುವಾರ ನಡೆದ ಹಳೆಉಪ್ಪಳ್ಳಿಯ ಜ್ಞಾನರಶ್ಮಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ವೈಜ್ಞಾನಿಕವಾಗಿ ದೇಶ ಇಂದು ಬಹಳಷ್ಟು ಮುಂದುವರೆದಿದೆ, ಆದರೆ ಎಲ್ಲೆಡೆ ಮೌಲ್ಯಗಳು ಕುಸಿಯುತ್ತಿರುವುದು ಕಂಡು ಬರುತ್ತಿದೆ, ಇದರಿಂದಾಗಿ ರಾಷ್ಟ್ರದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ, ಸಮಾಜದಲ್ಲಿ ಶಾಂತಿ, ನೆಮ್ಮದಿ, ಸಾಮರಸ್ಯ ಮರೆಯಾಗುತ್ತಿದೆ ಎಂದು ವಿಷಾದಿಸಿದರು.ಈ ಹಿನ್ನೆಲೆಯಲ್ಲಿ ಪೋಷಕರು ಮತ್ತು ಶಿಕ್ಷಕರು ಪಠ್ಯದ ಜೊತೆಗೆ ಮಕ್ಕಳಲ್ಲಿ ಉನ್ನತ ಮೌಲ್ಯಗಳನ್ನು ಮತ್ತು ಆತ್ಮಬಲವನ್ನು ಬೆಳೆಸಬೇಕು, ಹಾಡು, ಕ್ರೀಡೆಯ ಜೊತೆಗೆ ಮಕ್ಕಳಿಗೆ ಯೋಗ ಮತ್ತು ಧ್ಯಾನ ಮಾಡುವುದನ್ನೂ ಕಲಿಸಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಂಶುಪಾಲೆ ಪಾಲಾಕ್ಷಮ್ಮ ವಿದ್ಯಾರ್ಥಿಗಳನ್ನು ಶಿಕ್ಷಣವಂತರನ್ನಾಗಿಸುವುದರ ಜೊತೆಗೆ ಅವರಲ್ಲಿ ನಮ್ಮ ಸಂಸ್ಕøತಿ ಮತ್ತು ಸಂಸ್ಕಾರವನ್ನು ಬೆಳೆಸುವ ಕೆಲಸವನ್ನೂ ಶಾಲೆ ಮಾಡುತ್ತಿದೆ ಎಂದು ತಿಳಿಸಿದರು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು, ವಾರ್ಷಿಕೋತ್ಸವದ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು, ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು.
ಕೃಷಿಕ ಯು.ಹೆಚ್.ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು, ಖಾಸಗಿ ಶಾಲೆಗಳ ಒಕ್ಕೂಟದ ಕಾರ್ಯದರ್ಶಿ ಉಮಾಶಂಕರ್, ರೇಣುಕಾಚಾರ್ಯ ಟ್ರಸ್ಟ್‍ನ ಖಜಾಂಚಿ ಯು.ಎಂ.ಬಸವರಾಜ್, ಬಿ.ಎಂ.ನೀಲಕಂಠಪ್ಪ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ವಿಘ್ನೇಶ್, ರಾಜಯೋಗಿನಿ ಬಿ.ಕೆ.ಪ್ರೇಮ ಉಪಸ್ಥಿತರಿದ್ದರು.
ಆಜ್ರಾ ಮತ್ತು ಸಂಗೀತ ಕಾರ್ಯಕ್ರಮವನ್ನು ನಿರೂಪಿಸಿದರು, ಶಾಲೆಯ ಕಾರ್ಯದರ್ಶಿ ನಂದಕುಮಾರ್ ಸ್ವಾಗತಿಸಿದರು, ಶಿಕ್ಷಕಿ ಗೀತಾ ವಂದಿಸಿದರು.
Home ಸ್ಥಳಿಯ ಸುದ್ದಿ ಪೋಷಕರು ಮತ್ತು ಶಿಕ್ಷಕರು ಪಠ್ಯದ ಜೊತೆಗೆ ಮಕ್ಕಳಲ್ಲಿ ಉನ್ನತ ಮೌಲ್ಯಗಳನ್ನು ಮತ್ತು ಆತ್ಮಬಲವನ್ನು ಬೆಳೆಸಬೇಕು: ಬಿ.ಕೆ.ಭಾಗ್ಯ…










