ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ದೇಹ ಸಧೃಡವಾಗುತ್ತದೆ, ಆರೋಗ್ಯ ವೃದ್ದಿಸುತ್ತದೆ.- ಸೋಮಶೇಖರ್…

365
firstsuddi

ಚಿಕ್ಕಮಗಳೂರು: ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಸೋಮಶೇಖರ್ ಹೇಳಿದರು.ಜಿಲ್ಲಾ ಪಂಚಾಯಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಶ್ರೀ ಗುರುಸಿದ್ದರಾಮೇಶ್ವರ ವಿದ್ಯಾಸಂಸ್ಥೆಯ ಸಹಯೋಗದಲ್ಲಿ ನಗರದ ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಸಬಾ 4 ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ದೇಹ ಸಧೃಡವಾಗುತ್ತದೆ, ಆರೋಗ್ಯ ವೃದ್ದಿಸುತ್ತದೆ ಎಂದ ಅವರು ಮಕ್ಕಳು ಇದನ್ನು ಅರಿತು ಪಠ್ಯದ ಜೊತೆಗೆ ಕ್ರೀಡೆಗಳಲ್ಲೂ ಭಾಗವಹಿಸಬೇಕು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಯಣ್ಣ ಇತ್ತೀಚೆಗೆ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ದೇಶದ 69 ಕ್ರೀಡಾಪಟುಗಳು ಪದಕಗಳನ್ನು ಗಳಿಸಿದ್ದು, ವಿದ್ಯಾರ್ಥಿಗಳು ಅವರನ್ನು ಮಾದರಿಯಾಗಿ ತೆಗೆದುಕೊಂಡು ಸಾಧನೆ ಮಾಡಬೇಕು ಎಂದು ಸಲಹೆ ಮಾಡಿದರು.ತಾಲ್ಲೂಕು ಕ್ರೀಡಾಧಿಕಾರಿ ರವಿಕುಮಾರ್ ಮಾತನಾಡಿ ಇದು ಹೋಬಳಿ ಮಟ್ಟದ ಅಂತಿಮ ಕ್ರೀಡಾಕೂಟವಾಗಿದ್ದು, ಇದರಲ್ಲಿ ವಿಜೇತರಾದವರು ಸೆ.7 ರಂದು ನಡೆಯಲಿರುವ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ಅರ್ಹತೆ ಪಡೆಯುತ್ತಾರೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಅತಿಥೇಯ ಶಾಲೆ ಶ್ರೀ ಗುರುಸಿದ್ದರಾಮೇಶ್ವರ ವಿದ್ಯಾಸಂಸ್ಥೆಯ ಕಾರ್ಯಾಧ್ಯಕ್ಷ ಬಿ.ಆರ್.ಜಗದೀಶ್ ಕ್ರೀಡಾಕೂಟ ಆಯೋಜಿಸಲು ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಪರಮೇಶ್ವರ್ ಕ್ರೀಡಾಧ್ವಜಾರೋಹಣ ನೆರವೇರಿಸಿದರು, ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ದೈಹಿಕ ಶಿಕ್ಷಕರ ಸಂಘದ ಕಾರ್ಯದರ್ಶಿ ಶಿವಪ್ಪ, ಶಿಕ್ಷಕರ ಸಂಘದ ತಾಲ್ಲೂಕು ಉಪಾಧ್ಯಕ್ಷ ಕಿರಣ್‍ಕುಮಾರ್, ಅತಿಥೇಯ ಶಾಲೆ ಶ್ರೀ ಗುರುಸಿದ್ದರಾಮೇಶ್ವರ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ನಿಂಗೇಗೌಡ, ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಚಂದ್ರಶೇಖರ್, ಖಜಾಂಚಿ ಯು.ಬಿ.ಶಾಂತಕುಮಾರ್, ಸಿ.ಆರ್.ಪಿ ಗಳಾದ ರಂಗನಾಥ್, ಜಗದೀಶ್, ಜಯರಾಂ ಉಪಸ್ಥಿತರಿದ್ದರು.