ಕಲಬುರಗಿ : ಎನ್.ವಿ.ಮೈದಾನದಲ್ಲಿ ಇಂದು ಕರ್ನಾಟಕ ಬಿಜೆಪಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿ ಜಿಲ್ಲೆಯ ಆತ್ಮೀಯ ನಾಗರಿಕ ಬಂಧು-ಭಗಿನಿಯರೇ ಕಲಬುರಗಿ ಜಿಲ್ಲೆಗೆ ಬಂದಿರುವುದಕ್ಕೆ ನನಗೆ ಅತ್ಯಂತ ಸಂತೋಷವಾಗಿದೆ . ಕಾರ್ಯಕ್ರಮಕ್ಕೆ ಬಂದವರೆಲ್ಲರಿಗೂ ಧನ್ಯವಾದ ಎಂದು ಕನ್ನಡದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಆರಂಭಿಸಿದರು. ಕಳೆದ ಬಾರಿ ಚುನಾವಣೆ ಪ್ರಚಾರಕ್ಕೆ ಕಲಬುರಗಿಗೆ ಬಂದಿದ್ದೆ. ಕಲಬುರಗಿಗೆ ಹಲವು ಯೋಜನೆಗಳನ್ನ ಕೊಟ್ಟಿದ್ದೇವೆ . ಬೀದರ್-ಕಲಬುರಗಿ ರೈಲು ಮಾರ್ಗವನ್ನು ನಮ್ಮ ಸರ್ಕಾರವೇ ಪೂರ್ಣಗೊಳಿಸಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಆಯುಷ್ಮಾನ್ ಎಂಬ ಮಹತ್ವಪೂರ್ಣ ಯೋಜನೆ ಆರಂಭಿಸಿದ್ದೇವೆ .ಈ ಯೋಜನೆಯಲ್ಲಿ ಬಡವರು ಉಚಿತ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ಸ್ಥಗಿತಗೊಂಡ ಯೋಜನೆಗಳಿಗೆ ಚಾಲನೆ ನೀಡಿದ್ದೇವೆ. ರಾಜ್ಯದ ಅಭಿವೃದ್ಧಿಯಿಂದ ಹಿಂದೆ ಸರಿಯಲ್ಲ ಈ ಪ್ರಧಾನ ಸೇವಕ.
ಕೇಂದ್ರ ಸರ್ಕಾರ ಒಂದು ರೂಪಾಯಿ ನೀಡಿದರೂ ಕೂಡಾ ಅದು ರೈತರ, ಬಡವರ ಖಾತೆಗೆ ನೇರವಾಗಿ ಜಮಾ ಆಗಲಿದೆ.ಕರ್ನಾಟಕದಲ್ಲಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ರೈತ ವಿರೋಧಿಯಾಗಿದೆ. ರಾಜ್ಯ ಸರ್ಕಾರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅರ್ಹ ಫಲಾನುಭವಿಗಳ ಪಟ್ಟಿಯನ್ನು ನೀಡಬೇಕಿತ್ತು. ಆದರೆ ಕರ್ನಾಟಕ ಸರ್ಕಾರ ನಮಗೆ ರೈತರ ಮಾಹಿತಿಯನ್ನು ನೀಡುತ್ತಿಲ್ಲ. ದೆಹಲಿಯ ಸರ್ಕಾರ ರೈತರ ಖಾತೆಗೆ ನೇರವಾಗಿ 2 ಸಾವಿರ ರೂ ಹಾಕಿದರೆ ನಿಮಗೆ ಏಕೆ ಹೊಟ್ಟೆ ಉರಿ?ಮೋದಿ ಇರುವ ತನಕ ಕಳ್ಳರ ಅಂಗಡಿ ಬಂದ್ ಆಗಿರಲಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಿಮೋಟ್ ಕಂಟ್ರೋಲ್ ನಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಕಬ್ಬು ಬೆಳೆಗಾರರನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ. ಮೋದಿ ಭಯೋತ್ಪಾದನೆ, ಬಡತನದ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಆದರೆ, ಅವರು ಮೋದಿ ಹಠಾವೋ ಎಂದು ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.










