ಮೂಡಿಗೆರೆ : ಬೆಳ್ಳಿ ಹಬ್ಬದಂಥಹ ಕಾರ್ಯಕ್ರಮಗಳು ಅವಿಸ್ಮರಣೀಯವಾಗುವಂತಹ ದೃಷ್ಟಿಯಿಂದ ಆಗಬೇಕು : ಶಾಸಕ ಎಂ.ಪಿ.ಕುಮಾಸ್ವಾಮಿ.

261
firstsuddi

ಮೂಡಿಗೆರೆ : ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಮಾಚಗೊಂಡನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ವಿಜೃಂಭಣೆಯ ಬೆಳ್ಳಿ ಹಬ್ಬದ ಮಹೋತ್ಸವವನ್ನು ಆಚರಿಸಲಾಯಿತು.
ಭಾನುವಾರದಂದು ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮೂಡಿಗೆರೆ ಶಾಸಕ ಎಂ.ಪಿ.ಕುಮಾಸ್ವಾಮಿ ಅವರು, ಬೆಳ್ಳಿ ಹಬ್ಬದಂಥಹ ಕಾರ್ಯಕ್ರಮಗಳು ಅವಿಸ್ಮರಣೀಯವಾಗುವಂತಹ ದೃಷ್ಟಿಯಿಂದ ಆಗಬೇಕು ಇಂತಹ ಉದ್ದೇಶದಿಂದಲೇ ಕಾರ್ಯಕ್ರಮವನ್ನು ವೈಭವದಿಂದ ನಡೆಸುತ್ತಿರುವುದು ಸಂತಸ ತಂದಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿಗಳಿಗೆ ಹಾಗೂ ಸ್ಥಳೀಯರಿಗೆ ಪ್ರಥಮ ಪ್ರಾಶಸ್ಥ್ಯ ನೀಡುವ ಉದ್ದೇಶದಿಂದ ಯೋಜನೆ ರೂಪಿಸಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇಂದಿನ ಕಾರ್ಯಕ್ರಮದ ಯಶಸ್ಸು ಎಲ್ಲರ ಶ್ರಮವನ್ನು ಸಾರ್ಥಕ ಮಾಡಿದೆ. ಸಾಮಾನ್ಯ ಹಳ್ಳಿಯ ಮಟ್ಟದಲ್ಲಿ ಇಂಥಹ ವಿಜೃಂಭಣೆಯ ಕಾರ್ಯಕ್ರಮಗಳು ಪ್ರಶಂಸನೀಯ ಎಂದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನ ಭಾಷಣ ಮಾಡಿದ ಡಿ.ಎ.ಸಿ.ಜಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕಿ ನಾಗಶ್ರೀ ಅವರು ಮಾತನಾಡಿ, ಇಂದಿನ ಬಿರುಸಿನ ಜೀವನದಲ್ಲಿ ತಮ್ಮ ಮಾತ್ರ ಭಾಷೆಯನ್ನು ಮರೆತು ಉದ್ಯೋಗ ಅರಸುವ ನಿಟ್ಟಿನಲ್ಲಿ ಆಂಗ್ಲ ಮಾದ್ಯಮದಲ್ಲಿ ವ್ಯಾಸಂಗ ಮಾಡಲು ಆಸಕ್ತಿ ತೋರಿಸುತ್ತಿದ್ದೇವೆ. ಆದರೆ ನಿಜವಾದ ಅರ್ಥದಲ್ಲಿ ಓದಿನಲ್ಲಿ ಇರುವ ಸಂತಸವನ್ನೇ ಕಳೆದುಕೊಂಡು ನಿರಾಶದಾಯಕವಾದ ಜೀವನವನ್ನು ಸಾಗಿಸುವಂತಾಗಿದೆ. ಓದಿನ ಮಧ್ಯೆ ಮಕ್ಕಳಿಗೆ ಸಂತೋಷ ಉಂಟುಮಾಡುವ ಒಗಟು ಬಿಡಿಸುವಿಕೆ ಮುಂತಾದ ಗ್ರಾಮೀಣ ಶೈಲಿಯ ಆಟಗಳನ್ನು ಆಡಿಸಿ ಅವುಗಳ ಬುದ್ಧಿಮತ್ತೆಯನ್ನು ಹೆಚ್ಚಿಸುವಲ್ಲಿ ಶಿಕ್ಷಕರು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿ ಮಾತನಾಡಿದ ಬೇರುಗಂಡಿ ಬೃಹನ್ಮಠದ ಶ್ರೀ ರೇಣುಕಾ ಮಹಾಂತ ಸ್ವಾಮೀಜಿಯವರು, ಓದಿನಲ್ಲಿ ಶ್ರದ್ಧೆ ಬಹಳ ಮುಖ್ಯ ಇಲ್ಲಿನ ಶಾಲೆಯಲ್ಲಿ ವ್ಯಾಸಂಗ ಮಾಡಿ ಉನ್ನತ ಸ್ಥರಕ್ಕೆ ಏರಿದ ಹಲವಾರು ವಿದ್ಯಾರ್ಥಿಗಳು ನಮಗೆ ಕಾಣಸಿಗುತ್ತಿದ್ದಾರೆ. ಶಿಕ್ಷಕರುಗಳುಇನ್ನೂ ಹೆಚ್ಚಿನ ಮಟ್ಟದಲ್ಲಿ ಗ್ರಾಮೀಣ ಭಾಗದಿಂದ ಅತ್ಯತ್ತಮ ಪ್ರತಿಭೆಗಳನ್ನು ಗುರುತಿಸಿ ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್ ಅವರು ಮಾಡಿದರು. ಮುಖ್ಯ ಅತಿಥಿಗಳಾಗಿ ಸತ್ತಿಹಳ್ಳಿ ಮಾಜಿ ಶಾಸಕಿ ಡಾ.ಮೋಟಮ್ಮ, ಗ್ರಾ.ಪಂ.ಅಧ್ಯಕ್ಷ ರಮೇಶ್, ಎಸ್.ಡಿ.ಎಂ.ಸಿ ಅಧ್ಯಕ್ಷ ಎಸ್.ಬಾಬು, ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷೆ ಜೆಸಿಂಥಾ ಅನಿಲ್‍ಕುಮಾರ್, ತಾ.ಪಂ.ಅಧ್ಯಕ್ಷ ನೆಟ್ಟಿಕೆರೆಹಳ್ಳಿ ಜಯಣ್ಣ, ಜಿ.ಪಂ.ಸದಸ್ಯ ನಿಖಿಲ್ ಚಕ್ರವರ್ತಿ, ರೇಖಾಅನಿಲ್, ಸಿಬಿಸಿ ಕಾಲೇಜು ವಿಭಾಗದ ಅಧ್ಯಕ್ಷ ಯೋಗೇಶ್, ಸತ್ತಿಹಳ್ಳಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷೆ ವನಿತಾ, ಆಲ್ದೂರು ಠಾಣಾಧಿಕಾರಿ ಕೆ.ಆರ್.ಸುನೀತಾ, ಸಾ.ಶಿ.ಇ ಉಪನಿರ್ದೇಶಕರಾದ ಜಯಣ್ಣ, ಶಿವಪ್ಪ, ಕ್ಷೇತ್ರ ಶಿಕ್ಷಣ ಅಧಿಕಾರಿ ಎಸ್.ಆರ್.ಮಂಜುನಾಥ್, ಜಿಜೆಸಿಹೆಚ್‍ಎಸ್‍ನ ಶಿವಕುಮಾರ್.ಎನ್.ಆರ್., ಚಿಕ್ಕಮಗಳೂರು ನಗರ ಠಾಣೆಯ ಪಿಎಸ್.ಐ ಹಾಗೂ ಮಾಚಗೊಂಡನಹಳ್ಳಿ ಶಾಲೆಯ ಹಳೆಯ ವಿದ್ಯಾರ್ಥಿ ತೇಜಸ್ವಿ.ಟಿ.ಐ. ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರಿಗೆ, ನಿವೃತ್ತ ಶಿಕ್ಷಕರಿಗೆ, ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕರಿಗೆ, ಸಾಧಕರುಗಳಿಗೆ, ಶಾಲೆಯ ಹಳೆಯ ವಿದ್ಯಾರ್ಥಿಗಳಿಗೆ ಹಾಗೂ ಶಾಲೆಯ ಅಭಿವೃಧ್ಧಿಗಾಗಿ ಶ್ರಮಿಸಿದ ದಾನಿಗಳಿಗೆ ಗೌರವ ಸಮರ್ಪಣೆ ಮಾಡಲಾಯಿತು. ಇದೇ ದಿನ ಸಂಜೆ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಹಾಗೂ ಸಾಗರದ ಪರಿಣಿತಿ ಕಲಾ ಸಂಘದ ವತಿಯಿಂದ ಆರ್ಕೇಸ್ಟ್ರಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.