ವಿಧಾನಸಭಾ ಅಧಿವೇಶನದಲ್ಲಿ ಮಂಗಳೂರು ಗೋಲಿಬಾರ್ ಪ್ರಕರಣ ಬಗ್ಗೆ ಪ್ರಸ್ತಾಪ…

165
firstsuddi

ಬೆಂಗಳೂರು : ಮಂಗಳೂರು ಗೋಲಿಬಾರ್ ಪ್ರಕರಣದ ಬಗ್ಗೆ ವಿಧಾನಸಭಾ ಕಲಾಪದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ಪ್ರತಿರೋಧ ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆಯ ಸೌಂದರ್ಯ. ಸರ್ಕಾರ ರೂಪಿಸಿ ಜಾರಿಗೊಳಿಸುವ ಯಾವುದೇ ಕಾನೂನಿಗೆ ಪರ-ವಿರೋಧದ ಅಭಿಪ್ರಾಯಗಳು ಮೂಡಿಬರುವುದು ಸಾಮಾನ್ಯ. ಹೀಗೆ ಮೂಡಿಬಂದ ಜನರ ಅಭಿಪ್ರಾಯವನ್ನು ಹತ್ತಿಕ್ಕಲು ಸರ್ಕಾರಗಳು ಪ್ರಯತ್ನಿಸಿದರೆ ಅದು ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಡಿಸೆಂಬರ್ 19ರಂದು ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ಅಲ್ಲಿನ ಸ್ಥಳೀಯರು ಡಿ.18ರ ಬೆಳಿಗ್ಗೆ ಪೊಲೀಸ್ ಇಲಾಖೆಯ ಅನುಮತಿ ಪಡೆದಿದ್ದರು. ಆದರೆ ಇದೇ ದಿನ ಸಂಜೆ ಪೊಲೀಸ್ ಇಲಾಖೆC 144 ಸೆಕ್ಷನ್ ಜಾರಿ ಮಾಡಿತು. ಈ ವಿಚಾರ ಹೆಚ್ಚು ಪ್ರಚಾರವಾಗದ ಕಾರಣ, ಡಿ.19 ರಂದು 100 ರಿಂದ 150 ಮಂದಿ ಪ್ರತಿಭಟನೆಯಲ್ಲಿ ನಿರತರಾಗಿದ್ದರು. ಮಂಗಳೂರಿನ ಸ್ಟೇಟ್ ಬ್ಯಾಂಕ್ ಎಂಬ ಜನನಿಬಿಡ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದಲ್ಲದೆ, 144 ಸೆಕ್ಷನ್ ಬಗ್ಗೆ ಮಾಹಿತಿಯಿಲ್ಲದೆ ಪ್ರತಿಭಟನೆಗೆ ಬಂದಿದ್ದ ಪ್ರತಿಭಟನಾಕಾರರ ಮನವೊಲಿಸಿ ಮನೆಗೆ ಕಳುಹಿಸುವ ಬದಲು ಗೋಲಿಬಾರ್ ಮಾಡಿ ಇಬ್ಬರು ಅಮಾಯಕರನ್ನು ಬಲಿ ಪಡೆದರು.

ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ಗೋಪಾಲಗೌಡರ ನೇತೃತ್ವದ ಪೀಪಲ್ಸ್ ಟ್ರಿಬ್ಯುನಲ್ ಮಂಗಳೂರಿಗೆ ತೆರಳಿ ಪರಿಸ್ಥಿತಿಯ ಅಧ್ಯಯನ ಮಾಡಿ ನೀಡಿರುವ ವರದಿಯಲ್ಲಿ, ಆ ದಿನ 144 ಸೆಕ್ಷನ್ ಜಾರಿಗೊಳಿಸುವ ಅಗತ್ಯವೇ ಇರಲಿಲ್ಲ ಎಂದು ಹೇಳಿದೆ. ಮಂಗಳೂರು ಗೋಲಿಬಾರ್ ಪ್ರಕರಣದಲ್ಲಿ ಸಿಸಿಟಿವಿ ವೀಡಿಯೊ ಹಾಗೂ ಫೋಟೋಗಳಲ್ಲಿ ತೋರಿಸಿರುವಂತೆ ಪ್ರತಿಭಟನಾಕಾರರು ಮಾರಕಾಸ್ತ್ರ ಹೊಂದಿರುವ ಬಗ್ಗೆ ಯಾವುದೇ ಆಧಾರಗಳನ್ನು ಹಾಜರುಪಡಿಸಿಲ್ಲ ಹಾಗೂ ಈ ವೇಳೆ ಏನು 21 ಜನರನ್ನು ಬಂಧಿಸಲಾಗಿತ್ತು, ಅವರಲ್ಲಿ ಯಾರೊಬ್ಬರು ಪ್ರತಿಭಟನೆಯಲ್ಲಿ ಭಾಗವಹಿಸಿದ ಬಗ್ಗೆ ಸೂಕ್ತ ದಾಖಲೆಗಳಿಲ್ಲ ಎಂದು ಹೈಕೋರ್ಟ್ ಹೇಳಿದೆ. ಮಂಗಳೂರಿನಲ್ಲಿ ಬಂಧನಕ್ಕೊಳಗಾಗಿದ್ದ 21 ಜನರಿಗೆ ನ್ಯಾಯಾಲಯವು ಜಾಮೀನು ನೀಡಿದೆ. ಅವರ ಜೊತೆಯಲ್ಲಿದ್ದ ಇಬ್ಬರು ಗೋಲಿಬಾರ್ಗೆ ಬಲಿಯಾಗಿದ್ದಾರೆ. ಬಂಧನಕ್ಕೊಳಗಾದವರು ಪ್ರತಿಭಟನೆಯಲ್ಲಿ ಭಾಗವಹಿಸಿಲ್ಲ ಎಂದಾದರೆ ಗೋಲಿಬಾರ್ನಲ್ಲಿ ಮೃತಪಟ್ಟವರು ಕೂಡ ಅಮಾಯಕರಲ್ಲವೇ?

ಮಂಗಳೂರು ಗೋಲಿಬಾರ್ ಗೆ ಮುನ್ನ ದಿನ ಮುಖ್ಯಮಂತ್ರಿಗಳೇ ರಾಜ್ಯದಲ್ಲಿ ಲಾಠಿಚಾರ್ಜ್ ಮಾಡದಂತೆ ಆದೇಶಿಸಿದ್ದೇನೆ ಎಂದು ಹೇಳಿದ್ದರು, ಮರುದಿನವೇ ಗೋಲಿಬಾರ್ ನಡೆದು ಇಬ್ಬರು ಅಮಾಯಕರು ಮೃತರಾದರು. ರಾಜ್ಯದಲ್ಲಿ ಮುಖ್ಯಮಂತ್ರಿಗಳನ್ನು ಮೀರಿ ಆದೇಶ ನೀಡುವ ಕಾಣದ ಕೈಗಳಿವೆ. ಇಲ್ಲದಿದ್ದರೆ ಆದೇಶವಿಲ್ಲದೆ ಲಾಠಿಚಾರ್ಜ್, ಗೋಲಿಬಾರ್ ಮಾಡಲು ಹೇಗೆ ಸಾಧ್ಯ?ಎಂದು ಪ್ರಶ್ನಿಸಿದ್ದಾರೆ.