ಚಿಕ್ಕಮಗಳೂರು:ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ತಕ್ಷಣ ಆರಂಭಿಸುವಂತೆ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಅವರನ್ನು ಶನಿವಾರ ಭೇಟಿ ಮಾಡಿದ ಸಂಘದ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ಸ್ಥಗಿತಗೊಂಡಿರುವ ವರ್ಗಾವಣೆ ಪ್ರಕ್ರಿಯೆಯನ್ನು ಆರಂಭಿಸಲು ಮೇಲ್ಮನೆ ಮತ್ತು ಕೆಳಮನೆಯ ಅಧಿವೇಶನದಲ್ಲಿ ತುರ್ತು ವಿಧೇಯಕವೆಂದು ಪರಿಗಣಿಸಿ ಅಂಗೀಕರಿಸಿರುವುದರಿಂದ ರಾಜ್ಯ ಸರ್ಕಾರ ಶಿಕ್ಷಕರ ವರ್ಗಾವಣೆಯನ್ನು ಪುನಃ ಆರಂಭಿಸಬೇಕು. ವಿಧವೆಯರು, ಅಂಗವಿಕಲರು ಅನಾರೋಗ್ಯದಿಂದ ಬಳಲುತ್ತಿರುವವರ ವರ್ಗಾವಣೆ ಪ್ರಕ್ರಿಯೆಗೆ ಕೂಡಲೇ ಚಾಲನೆ ನೀಡಬೇಕು ಎಂದು ಒತ್ತಾಯಿಸಿದರು.
ಇತರ ಇಲಾಖಾ ನೌಕರರಿಗೆ ದೊರೆಯುತ್ತಿರುವ ವಾರ್ಷಿಕ ರಜೆಗಳು ಶಿಕ್ಷಕರಿಗೂ ಲಭಿಸುವಂತೆ ಮಾಡಬೇಕು, ತಾರತಮ್ಯ ಧೋರಣೆಯನ್ನು ಕೈಬಿಡಬೇಕು, ಚುನಾವಣಾ ಕರ್ತವ್ಯಕ್ಕೆ ಹಾಜರಾಗುವ ಶಿಕ್ಷಕರಿಗೆ ಚುನಾವಣೆಯ ಮುನ್ನಾದಿನ, ಮತ್ತು ಮರುದಿನ, ಅನ್ಯಕಾರ್ಯ ನಿಮಿತ್ತ ರಜೆ ನೀಡಬೇಕು ಎಂದು ಆಗ್ರಹಿಸಿದರು.
ಶಿಕ್ಷಕರ ಈಗಿರುವ ಪಿಂಚಣಿ ಯೋಜನೆಯನ್ನು ರದ್ದು ಮಾಡಿ ಹಿಂದಿನ ಯೋಜನೆಯನ್ನು ಮುಂದುವರೆಸಬೇಕು, ಗ್ರಾಮೀಣ ಶಿಕ್ಷಕರುಗಳಿಗೆ ಮಾಹೆಯಾನ 2,500 ರೂ ಗ್ರಾಮೀಣ ಭತ್ಯೆ ಮಂಜೂರು ಮಾಡಬೇಕು, ಕೃಪಾಂಕದ ಮೇಲೆ ನೇಮಕಾತಿಯಾಗಿರುವ ಶಿಕ್ಷಕರುಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಹೇಳಿದರು.
ರೈತ ಸಂಘದ ಮುಖಂಡ ಆರ್.ಆರ್.ಮಹೇಶ್, ಸಂಘಧ ಜಿಲ್ಲಾಧ್ಯಕ್ಷ ಎಸ್.ರೇವಣ್ಣ, ಪ್ರಧಾನ ಕಾರ್ಯದರ್ಶಿ ಹೆಚ್.ಪಿ.ಶಂಕರಪ್ಪ, ಖಜಾಂಚಿ ಸುಮಾ ರಾಣಿ, ಉಪಾಧ್ಯಕ್ಷರಾದ ಪಿ.ಮಂಜಪ್ಪ, ರಾಜಶ್ರೀ, ನಾಗರಾಜ್, ತಾಲ್ಲೂಕು ಅಧ್ಯಕ್ಷ ಮೂಡಲಗಿರಿಯಪ್ಪ, ಸಹಕಾರ್ಯದರ್ಶಿ ಎಸ್.ಕೆ.ಕೃಷ್ಣಪ್ಪ, ಖಜಾಂಚಿ ಸಂತೋಷ್ ಹಾಜರಿದ್ದರು
Home ಸ್ಥಳಿಯ ಸುದ್ದಿ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ತಕ್ಷಣ ಆರಂಭಿಸುವಂತೆ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಅವರಿಗೆ ಮನವಿ…










