ಮೂಡಿಗೆರೆ- ಕಳೆದ ಜನವರಿ ತಿಂಗಳಲ್ಲಿ ನಡೆದ ಕಳಸ-ಹೊರನಾಡು ಮರು ಡಾಮರೀಕರಣ ಮೂರು ತಿಂಗಳಿನಲ್ಲಿ ಹೊಂಡ ಬಿದ್ದು,ಇದರ ಪರಿಹಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದ್ದ ಹೋರಾಟಕ್ಕೆ ಕಡೆಗೂ ಫಲಶೃತಿ ದೊರೆತಿದೆ.ಕಳಸ ಮಂಜಿನಕಟ್ಟೆ ಸಮೀಪ ರಸ್ತೆಯಲ್ಲಿ ಕಳೆದ ಎರಡು ತಿಂಗಳಿನಿಂದ ದೊಡ್ಡದೊಂದು ಹೊಂಡ ನಿರ್ಮಾಣವಾಗಿತ್ತು.ಇದರಿಂದ ಸಾರ್ವಜನಿಕರಿಗೆ ತೀರಾ ತೊಂದರೆ ಉಂಟಾಗುತ್ತಿತ್ತು.ಈ ಬಗ್ಗೆ ಜನಪ್ರತಿನಿಧಿಗಳಿಗೆ,ಅಧಿಕಾರಿಗಳ ಗಮನ ಸೆಳೆದರೂ ಕೂಡ ಅದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿರಲ್ಲಿಲ್ಲ.ಇದರಿಂದ ಬೇಸೆತ್ತ ಕಳಸ ಪಟ್ಟಣದ ಕೆಲ ಯುವಕರು ಸೇರಿ ಮಂಜಿನಕಟ್ಟೆ ಸಮೀಪ ಸುಸಜ್ಜಿತ ಈಜುಕೊಳವೊಂದನ್ನು ನಿರ್ಮಾಣ ಮಾಡಲಾಗಿದ್ದು ಇದರ ಉದ್ಘಾಟನೆಯನ್ನು ಸನ್ನಿಲೆಯೋನ್ ಮತ್ತು ದೀಪಿಕಾ ಪಡುಕೋಣೆ ಮಾಡಲಿದ್ದಾರೆ.ಖ್ಯಾತ ತಮಿಳು ನಟ ವಿಜಯ್ ಗುಂಡಿ ಸಮೀಪ ಸೆಲ್ಫಿ ತೆಗೆದುಕೊಳ್ಳುತ್ತಿರುವ ಹಾಗೆ,ಚಿತ್ರವೊಂದಕ್ಕೆ ನಟಿಯರ ಪೊಟೋವನ್ನು ಎಡಿಟ್ ಮಾಡಿ ಇಲಾಖೆಗೆ ಅಪಹಾಸ್ಯಮಾಡುವಂತೆ ಪೇಸ್ ಬುಕ್ ಮತ್ತು ವ್ಯಾಟ್ಸ್ ಆಪ್ ಮುಖಾಂತರ ಹರಿಯಬಿಡಲಾಗಿತ್ತು.ಇದನ್ನು ಸಾವಿರಾರು ಜನರು ವೀಕ್ಷಿಸಿ ರಾಜ್ಯದಾದ್ಯಂತ ದೊಡ್ಡ ಸುದ್ಧಿಯಾಯಿತು.ಇದರಿಂದ ಕೂಡಲೆ ಎಚ್ಚೆತ್ತ ಲೋಕಪಯೋಗಿ ಇಲಾಖೆಯ ಸೂಪರ್‍ಡೆಂಟಿಯಲ್ ಇಂಜಿನೀಯರ್ ರಾಜಕುಮಾರ ರೆಡ್ಡಿ,ಎಗ್ಸಿಕ್ಯೂಟಿವ್ ಇಂಜಿನೀಯರ್ ಆನಂದ ಮೂರ್ತಿ,ಎಇಇ ಆನಂದ ಪ್ರಕಾಶ್,ಕಿರಿಯ ಇಂಜಿನೀಯರಾದ ಜಯಸಿಂಗ್ ,ಚೆನ್ನಯ್ಯ ಸೋಮವಾರ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ಕಳಸದ ಕೆಲ ನಾಗರೀಕರು ಮುಖ್ಯ ರಸ್ತೆಯ ಕಾಮಗಾರಿ ನಡೆದು ಮೂರು ತಿಂಗಳಿನಲ್ಲಿ ಶಿಥಿಲಗೊಂಡಿರುವ ಬಗ್ಗೆ ಗಮನ ಸೆಳೆದರು.ಅಲ್ಲದೆ ಇಲಾಖೆಯು ಸೂಕ್ತ ರೀತಿಯಲ್ಲಿ ಚರಂಡಿಯ ನಿರ್ವಹಣೆ ಮಾಡದೆ ಇರುವ ಕಾರಣ ನೀರು ಚರಂಡಿ ಬಿಟ್ಟು ರಸ್ತೆಯಲ್ಲಿಯೇ ಹರಿಯುತ್ತಿದೆ.ಕುದುರೆಮುಖ ರಸ್ತೆಯಲ್ಲಿ ಬಿದ್ದ ಮಣ್ಣನ್ನು ತೆರವು ಮಾಡದೆ ಹಲವಾರು ಅಪಘಾತಗಳು ಆಗುತ್ತಿವೆ,ಕಳಸ ಹೋಬಳಿಯ ಬಹುತೇಕ ಕಡೆಗಳಲ್ಲಿ ನಡೆದ ರಸ್ತೆ ಕಾಮಗಾರಿಗಳು ನೆಲಕಚ್ಚಿ ಹೋಗಿವೆ.ಪುಟ್ ಪಾತ್ ಮೇಲೆ ಹಾಕಿರುವ ಚಪ್ಪಡಿ ಕಲ್ಲುಗಳು ಬಹುತೇಕ ಮುರಿದು ಹೋಗಿ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ.ಇಲ್ಲಿಯ ಇಂಜಿನೀಯರ್ ವಿಭಾಗದ ನಿರ್ಲಕ್ಯದಿಂದ ಇಲ್ಲಿಯ ಜನರು ತೊಂದರೆಗಳನ್ನು ಅನುಭವಿಸುವಂತಾಗಿದೆ ಎಂದು ಹಿರಿಯ ಅಧಿಕಾರಿಗಳ ಗಮನಸೆಳೆದರು.ಈ ಸಂದರ್ಭದಲ್ಲಿ ಮಂಜಿನಕಟ್ಟೆಯ ಸಮೀಪ ಬಿದ್ದಿದ್ದ ದೊಡ್ಡ ಗುಂಡಿಯನ್ನು ಕೂಡಲೇ ಮುಚ್ಚಿಸಲಾಯಿತು.ತಾತ್ಕಾಲಿಕವಾಗಿ ಈ ಕೆಲಸ ಮಾಡಲಾಗಿದೆ ಮಳೆಗಾಲ ಮುಗಿದ ಕೂಡಲೇ ರಸ್ತೆಯ ಸಂಪೂರ್ಣ ನಿರ್ವಹಣೆಯನ್ನು ಮಾಡುತ್ತೇವೆ.ರಸ್ತೆಯಲ್ಲಿಯೇ ನೀರು ಹರಿಯುತ್ತಿರುವ ಬಗ್ಗೆ ಅದನ್ನು ಚರಂಡಿಯಲ್ಲಿ ಹೋಗುವ ರೀತಿ ಬಿಡಿಸಿಕೊಡುವಂತ ವ್ಯವಸ್ಥೆಯನ್ನು ಮಾಡುತ್ತೇವೆ.ಚಪ್ಪಡಿಕಲ್ಲುಗಳು ಎಲ್ಲೆಲ್ಲಿ ತಂಡಾಗಿದ್ದಾವೆಯೋ ಅದಕ್ಕೆ ಯಾರು ಕಾರಣ ಅವರಿಗೆ ನೋಟೀಸು ಕೊಡಿಸುವ ವ್ಯವಸ್ಥೆಯನ್ನು ಮಾಡುತ್ತೇವೆ ಎನ್ನುವ ಭರವಸೆಯನ್ನು ನೀಡುತ್ತೇವೆ,ಕುದುರೆಮುಖ ರಸ್ತೆಯ ಬದಿಯ ನಿರ್ವಹಣೆಯನ್ನು ಮಾಡಿಕೊಡುವುದಾಗಿ ಬರವಸೆಯನ್ನು ನೀಡಿದರು.ಇನ್ನೊಂದು ಬಾರಿ ನಾವು ಪೇಸ್ ಬುಕ್ ಹೋರಾಟಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ನಾಗರೀಕರು ಕೇಳಿಕೊಂಡರು.ಈ ಸಂದರ್ಭದಲ್ಲಿ ಮಳೆಗಾಲದಲ್ಲಿ ಮುಳುಗಡೆಯಾಗಿ ಶಿಥಿಲಗೊಂಡಿರುವ ಹೆಬ್ಬಾಳೆ ಸೇತುವೆಯನ್ನು ಪರಿಶೀಲನೆ ಮಾಡಿದರು.ಈ ಸಂದರ್ಭದಲ್ಲಿ ನಾಗರೀಕರಾದ ಟಿಟ್ಟು ತೋಮಸ್,ರಿಜ್ವಾನ್,ವೀರೇಂದ್ರ,ಕೆ.ಸಿ.ಮಹೇಶ್, ಅಂಬರೀಶ್ ಭಟ್,ಸುನೀಲ್,ಜಯಂತ್,ರವಿ,,ರಿತೇಶ್,ಅನಿಲ್ ಇದ್ದರು.