ಶಿರಾಡಿಘಾಟ್ ಬಂದ್, ಚಾರ್ಮಾಡಿಯಲ್ಲಿ ವಾಹನ ಸಂಚಾರ ದಟ್ಟಣೆ, ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಜಿಲ್ಲಾಡಳಿತ…!

1325

ಮೂಡಿಗೆರೆ : ಜನವರಿ 15ರಿಂದ ಹಾಸನ-ಸಖಲೇಶಪುರ ಮಾರ್ಗವಾಗಿ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್ ಬಂದ್ ಆಗಲಿದ್ದು, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಿಂದ ಮಂಗಳೂರಿಗೆ ಹೋಗೋ ಕೊಟ್ಟಿಗೆಹಾರ-ಚಾರ್ಮಾಡಿ ಘಾಟ್ ಇನ್ಮುಂದೆ ಭಾರೀ ವಾಹನಗಳಿಂದ ಸಂಚಾರ ಅಸ್ತವ್ಯಸ್ತಗೊಳ್ಳಲಿದೆ. ಆದ್ದರಿಂದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸ್ಥಳಿಯರು ಒತ್ತಾಯಿಸಿದ್ದಾರೆ. ಮೂಡಿಗೆರೆ ಹ್ಯಾಂಡ್ ಪೋಸ್ಟ್ ಸರ್ಕಲ್ ರಸ್ತೆ ಕಿರಿದಾಗಿರೋದ್ರಿಂದ ಅಲ್ಲಿಗೂ ಪೊಲೀಸರ ನಿಯೋಜನೆ ಮಾಡುವ ಅಗತ್ಯವಿದೆ. ಯಾಕಂದ್ರೆ, ಇಲ್ಲಿ ಇನ್ಮುಂದೆ ದಿನನಿತ್ಯ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಆಗುವ ಸಂಭವವಿದೆ. ಮೂಡಿಗೆರೆ ಪೊಲೀಸರು ಇತ್ತ ಗಮನ ಹರಿಸುವ ಅಗತ್ಯವಿದೆ.

ಕೊಟ್ಟಿಗೆಹಾರದಿಂದ ಸುಮಾರು 15 ಕಿ.ಮೀ.ನಷ್ಟು ತೀರಾ ಕಿರಿದಾದ ರಸ್ತೆ ಹಾಗೂ ಹಾವುಬಳುಕಿನ ಮೈಕಟ್ಟಿನ ರಸ್ತೆಯಾದ್ದರಿಂದ ಅಪಘಾತಗಳ ಸಂಖ್ಯೆಯೂ ಹೆಚ್ಚಾಗಲಿದೆ ಅಂತಿದ್ದಾರೆ ಸ್ಥಳಿಯರು. ಆದ್ದರಿಂದ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ರಸ್ತೆಯ ಎರಡೂ ಬದಿಯಲ್ಲಿ ಜಾಗವಿರುವ ಕಡೆ ರಸ್ತೆಯನ್ನ ಸ್ವಲ್ಪ ವಿಸ್ತರಿಸೋದು ಪ್ರಯಾಣದ ದೃಷ್ಠಿಯಿಂದ ಒಳ್ಳೆಯದು. ಯಾಕಂದ್ರೆ, ಈ ಮಾರ್ಗದಲ್ಲಿ ಒಂದಿಷ್ಟು ಎಚ್ಚರ ತಪ್ಪಿದ್ರು ವಾಹನಗಳು ಪ್ರಪಾತಕ್ಕೆ ಬೀಳೋದು ಗ್ಯಾರಂಟಿ. ಸಾಲದಕ್ಕೆ ಇಲ್ಲಿನ ಪ್ರಕೃತಿಯೂ ಸಂಚಾರಕ್ಕೆ ಅಡಚಣೆಯುಂಟು ಮಾಡಲಿದೆ. ಈ ಭಾಗದಲ್ಲಿ ಯಾವಾಗಲೂ ಮಂಜು ಕವಿಯೋದ್ರಿಂದ ಇಲ್ಲಿನ ವಾಹನಗಳು ಹಗಲಲ್ಲೂ ಲೈಟ್ ಹಾಕಿಕೊಂಡೇ ಸಂಚಾರ ಮಾಡಬೇಕು. ಆದ್ದರಿಂದ ವಾಹನ ಸಂಚಾರದ ದೃಷ್ಠಿಯಿಂದ ಇಲ್ಲಿನ ರಸ್ತೆಗಳು ಆದಾಷ್ಟು ವಿಸ್ತಾರವಾಗದ್ರೆ ಸಂಚಾರ ಸುಗುಮ ಹಾಗೂ ಸುರಕ್ಷಿತವಾಗಿರುತ್ತೆ.

ಇನ್ನ ಪೊಲೀಸ್ ಇಲಾಖೆಯೂ ಕೂಡ ಇತ್ತ ಆದಷ್ಟು ಗಮನ ಹರಿಸೋದು ಒಳ್ಳೆಯದು. ಸಾಲದಕ್ಕೆ ಕೊಟ್ಟಿಗೆಹಾರದಲ್ಲಿರೋ ಚೆಕ್‍ಪೋಸ್ಟ್‍ನಲ್ಲಿ ದಿನದ 24 ಗಂಟೆಯೂ ಪೊಲೀಸರನ್ನ ನಿಯೋಜನೆ ಮಾಡೋದು ಒಳ್ಳೆಯದು. ಹೋಗಿ-ಬರುವ ವಾಹನಗಳ ಮೇಲೆ ಸೂಕ್ತ ನಿಗಾ ಇಡಬೇಕಾಗುತ್ತದೆ. ಯಾಕಂದ್ರೆ, ಚಾರ್ಮಾಡಿಯಲ್ಲಿ ಆಗಿಂದಾಗ್ಗೆ ಕೊಲೆ ಮಾಡಿ ಹೆಣಗಳನ್ನ ತಂದು ಬಿಸಾಡಿ ಹೋಗೋರ ಸಂಖ್ಯೆಗೇನು ಕಡಿಮೆ ಇಲ್ಲ. ಇನ್ಮುಂದೆ ಅಂತವರ ಸಂಖ್ಯೆಯೂ ಹೆಚ್ಚಾಗುವ ಸಾಧ್ಯತೆ ಇರುತ್ತೆ. ಹಾಗಾಗಿ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕೊಟ್ಟಿಗೆಹಾರದ ಚೆಕ್‍ಪೋಸ್ಟ್ ಬಳಿ ಇನ್ನಷ್ಟು ಸಿಸಿ ಕ್ಯಾಮರಾಗಳನ್ನ ಹಾಕುವ ಅವಶ್ಯಕತೆ ಇದೆ. ಮಂಗಳೂರಿನಿಂದ ಅಕ್ರಮವಾಗಿ ರಾತ್ರಿ ಪಾಳಯದಲ್ಲಿ ಮರಳು ಲಾರಿಗಳು ಎಗ್ಗಿಲ್ಲದೆ ಬರುತ್ತೆ ಅನ್ನೋ ಮಾತು ಸ್ಥಳಿಯರದ್ದು. ಇನ್ಮುಂದೆಯೂ ಇದು ಮುಂದುವರೆದ್ರೆ ಚಾರ್ಮಾಡಿಯಲ್ಲಿ ಅನಾಹುತ ಕಟ್ಟಿಟ್ಟ ಬುತ್ತಿ.

ಇನ್ನ ಗೋಣಿಬೀಡು, ಮೂಡಿಗೆರೆ, ಬಣಕಲ್ ಹಾಗೂ ಬೆಳ್ತಂಗಡಿ ಪೊಲೀಸರಿಗೆ ತಲೆನೋವಾಗೋದ್ರಲ್ಲಿ ಎರಡು ಮಾತಿಲ್ಲ. ವಾಹನ ದಟ್ಟನೆ ಜಾಸ್ತಿಯಾಗಿ ಟ್ರಾಫಿಕ್ ಜಾಮ್‍ನಿಂದ ಯಾವಾಗ ಬೇಕು ಅವಾಗ ಟ್ರಾಫಿಕ್ ಕ್ಲಿಯರ್ ಮಾಡಲು ಹೋಗಬೇಕಾಗುತ್ತದೆ. ಆದ್ದರಿಂದ ಇನ್ನ 15 ದಿನ ಇರುವಾಗ್ಲೇ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಂಡು, ಹೈವೇ ಪೆಟ್ರೋಲ್, ಚೆಕ್‍ಪೋಸ್ಟ್, ಸಿಸಿ ಕ್ಯಾಮರಾ, ರಸ್ತೆ ಎಲ್ಲದರ ಬಗ್ಗೆ ಸೂಕ್ತ ನಿಗಾ ವಹಿಸಿದ್ರೆ ಪೊಲೀಸರು ನೆಮ್ಮದಿಯಾಗಿರಬಹುದು, ಸಂಚಾರವು ಸುಗಮವಾಗಿರಲಿದೆ.