ಬೆಂಗಳೂರು:ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ಶಾಸಕರ ವಿಶೇಷ ಸಭೆಯಲ್ಲಿ ಮಾತನಾಡಿದ ಬಿ.ಎಸ್ ಯಡಿಯೂರಪ್ಪ ಅವರು ಸಚಿವ ರೇವಣ್ಣ ವಿರುದ್ಧ ಎ ಮಂಜು ಭೂ ಕಬಳಿಕೆ ಆರೋಪ ಮಾಡಿದ್ದು, ಈ ಕುರಿತು ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳದಿದ್ದರೆ ದೊಡ್ಡ ಹೋರಾಟ ಮಾಡಲಿದ್ದೇವೆ. ಡಿ.ಕೆ.ಶಿವಕುಮಾರ್ ಅವರೇ ನನಗೆ ಚೆಸ್ ಗೇಮ್ ಗೊತ್ತಿದೆ. ಪಾನ್ ಹೇಗೆ ಮೂವ್ ಮಾಡಬೇಕು ಅನ್ನುತ್ತೀರಲ್ಲಾ,ಎದುರಾಳಿಯೇ ಇಲ್ಲದೆ ಚೆಸ್ ಆಡುವುದಕ್ಕೆ ಬರುತ್ತದೆಯೇ? ಏನಾದರೂ ಹೇಳಿಕೆ ನೀಡುವ ಮೊದಲು ಸ್ವಲ್ಪ ಯೋಚಿಸಿ. ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಬೇಡಿ ಎಂದರು. ಸುಭಾಷ್ ಗುತ್ತೇದಾರ್ಗೆ ಕುಮಾರಸ್ವಾಮಿ ಆಮಿಷ ಒಡ್ಡಿದ್ದಾರೆ. ನಮ್ಮ ಪಕ್ಷಕ್ಕೆ ಬನ್ನಿ ಮಂತ್ರಿ ಮಾಡ್ತೇನೆ ಎಂದು ಆಫರ್ ನೀಡಿದ್ದಾರೆ. ನಮ್ಮ ಶಾಸಕರನ್ನು ಸಂಪರ್ಕ ಮಾಡ್ತಿದ್ದಾರೆ. 10 ಕ್ಕೂ ಹೆಚ್ಚು ಬಿಜೆಪಿ ಶಾಸಕರು ನಮ್ಮ ಜೊತೆ ಇದ್ದಾರೆ ಎಂದು ಹೇಳಿಕೆ ನೀಡಿರುವುದೇ ಸಿಎಂ ಯಾವ ಕೆಳಮಟ್ಟಕ್ಕೆ ಇಳಿದಿದ್ದಾರೆ ಎನ್ನುವುದಕ್ಕೆ ಉದಾಹರಣೆ ಎಂದು ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.










