ಕಳಸ:ಶ್ರೀ ಕ್ಷೇತ್ರ ಹೊರನಾಡಿನ ಜಗನ್ಮಾತೆ ಅನ್ನಪೂರ್ಣೇಶ್ವರಿಯ ಸನ್ನಿಧಿಯಲ್ಲಿ ಶ್ರೀ ಮಾತೆಗೆ ವಿಶೇಷ ಅಲಂಕಾರಗಳೊಂದಿಗೆ ದುರ್ಗಾದೇವಿಯ ಮೊದಲನೆ ಸ್ವರೂಪ ಹಂಸರೂಢ ಸರಸ್ವತಿಯ ರೂಪದಲ್ಲಿ ಮಾತೆ ಅನ್ನಪೂರ್ಣೆಶ್ವರಿ ಕಂಗೊಳಿಸಿದಳು.
ಬೆಳಿಗ್ಗೆ ಘಂಟೆ 6.30ರ ಸಮಯಕ್ಕೆ ಸರಿಯಾಗಿ ನವರಾತ್ರಿಯ ಪೂಜಾ ವಿಧಿ ವಿಧಾನಗಳು ಪ್ರಾರಂಭಗೊಂಡವು. ಸಪ್ತಶತಿ ಪಾರಾಯಣ,ವೇದ ಪಾರಾಯಣ,ಸುಂದರಕಾಂಡ ಪಾರಾಯಣ,ಕುಂಕುಮಾರ್ಚನೆ ಪೂಜೆಗಳು ನೆರವೇರಿದವು.ಬೆಳಿಗ್ಗೆ 8.30ಕ್ಕೆ ಶ್ರೀ ಪಂಚದುರ್ಗಾ ಹೋಮ ನಡೆಯಿತು.ಹೋಮದ ಪೂರ್ಣಹುತಿಯಲ್ಲಿ ದೇವಸ್ಥಾನದ ಧರ್ಮಕರ್ತರಾದ ಡಾ|ಜಿ.ಭೀಮೇಶ್ವರ ಜೋಷಿಯ ಪುತ್ರ ಜಿ.ಬಿ.ಗಿರಿಜಾಶಂಕರ್ ಜೋಷಿ ದಂಪತಿಗಳು ನೆರವೇರಿಸಿದರು.ಹೊರನಾಡಿನ ಸುತ್ತ ಮುತ್ತಲಿನ ಊರಿನ,ರಾಜ್ಯ ಹೋರ ರಾಜ್ಯಗಳ ಸಾವಿರಾರು ಭಕ್ತರು ಹೊರನಾಡಿಗೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ಪರ್ವತರಾಜ ಹಿಮವಂತನಲ್ಲಿ ಪುತ್ರಿಯಾಗಿ ಅವತರಿಸಿದ ಕಾರಣ ಶೈಲಪುತ್ರೀ ಎಂಬ ಹೆಸರಾಯಿತು ಶಿವನ ಅರ್ಧಾಂಗಿಯಾದ ಇವಳು ನವದುರ್ಗೆಯರಲ್ಲಿ ಪ್ರಥಮ ಶೈಲಪುತ್ರಿ ದುರ್ಗೆಯ ಮಹತ್ವ ಮತ್ತು ಶಕ್ತಿಗಳು ಅನಂತನಾಗಿವೆ.ನವರಾತ್ರಿಯ ಮೊದಲನೆ ದಿನದ ಪೂಜೆಯಲ್ಲಿ ಇವಳ ಪೂಜೆ ಉಪಾಸನೆ ಮಾಡಲಾಗುತ್ತದೆ.ಈ ಮೊದಲನೆ ದಿನದ ಉಪಾಸನೆಯಲ್ಲಿ ಯೋಗಿಗಳು ತಮ್ಮ ಮನವನ್ನು ಮೂಲಾಧಾರ ಚಕ್ರದಲ್ಲಿ ನೆಲೆಗೊಳಿಸುತ್ತಾರೆ.ಇಲ್ಲಿಂದಲೇ ಅವರ ಯೋಗಸಾಧನೆಯು ಪ್ರಾರಂಭವಾಗುತ್ತದೆ.ಈ ಶೈಲಪುತ್ರಿಯನ್ನು ಹೊರನಾಡಿನ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಹಂಸರೂಢಾ ಸರಸ್ವತಿಯಾಗಿ ಪೂಜಿಸುತ್ತಾರೆ.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಎಸ್.ಆರ್.ವಿನಯ ಶರ್ವ ಬೆಂಗಳೂರು ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ,ಸಂಜೆ ಬೇಲೂರು ನಾಗಲಕ್ಷ್ಮೀ ಶಿವರಾಂ ಮೈಸೂರು ಇವರಿಂದ ಹರಿಕಥೆ ಕಾರ್ಯಕ್ರಮ ನಡೆಯಿತು.










