ಹೊರನಾಡ ಅಧಿದೇವತೆ ಶ್ರೀ ಅನ್ನಪೂರ್ಣೇಶ್ವರಿಗೂ ಸರ್ಕಾರ ಹಾಗೂ ಅಧಿಕಾರಿಗಳಂದ್ರೆ ಅಪನಂಬಿಕೆ ಹಾಗೂ ಭಯ. ಈ ಮಳೆಗಾಲದಲ್ಲಿ ಕಿತ್ತೋದ ರಸ್ತೆ ಮುಂದಿನ ಮಳೆಗಾಲಕ್ಕೆ ದುರಸ್ತಿಯಾದ್ರೆ ನನ್ನ ಪುಣ್ಯ, ಇವರನ್ನ ನೆಚ್ಚಿಕೊಂಡ್ರೆ ಆಗೋದಿಲ್ಲ ಎಂದು ತನ್ನ ರಸ್ತೆಯನ್ನ ತಾನೇ ಸರಿಪಡಿಸಿಕೊಂಡಿದ್ದಾಳೆ. ಈ ವರ್ಷ ಮಲೆನಾಡು ಭಾಗದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಭದ್ರೆಯ ರಭಸಕ್ಕೆ ಹೊರನಾಡಿಗೆ ಸಂಪರ್ಕ ಕಲ್ಪಿಸೋ ಹೆಬ್ಬಾಳೆ ಸೇತುವೆ ಶಿಥಿಲಾವಸ್ಥೆ ತಲುಪಿತ್ತು. ಒಂದೇ ತಿಂಗಳಲ್ಲಿ ಈ ಸೇತುವೆ ಏಳು ಬಾರಿ ಮುಳುಗಿತ್ತು.ಸೇತುವೆ ಮೇಲಿನ ಸಿಮೆಂಟ್ ಕಾಂಕ್ರೀಟ್ ಕಿತ್ತು ಹೋಗಿ, ಅಲ್ಲಲ್ಲೇ ರಂಧ್ರಗಳಾಗಿ, ಸೇತುವೆ ಮೇಲಿದ್ದ ತಡೆಗೋಡೆಯ ಕಂಬಗಳು ಮುರಿದು ಬಿದ್ದಿದ್ವು. ಕಾಂಕ್ರೀಟ್ ಕಿತ್ತಿದ್ರಿಂದ ಕಬ್ಬಿಣದ ಸರಳುಗಳು ಹೊರಬಂದಿದ್ವು. ಕಳೆದೊಂದು ತಿಂಗಳಿನಿಂದ ಸೇತುವೆ ಸ್ಥಿತಿ ಹೀಗೆ ಇದ್ರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾತ್ರ ತಲೆ ಕೆಡಿಸಿಕೊಂಡಿರಲಿಲ್ಲ. ಆದ್ರೆ, ಸೇತುವೆ ಮೇಲೆ ಕಬ್ಬಿಣದ ಸರಳುಗಳು ಹೊರಬಂದಿರೋದ್ರಿಂದ ಭಕ್ತರು ಅಥವ ಪ್ರವಾಸಿಗರ ಕಾರಿನ ಟೈರ್‍ಗಳಿಗೆ ಚುಚ್ಚಿ ಅನಾಹುತವಾದ್ರೆ ಗತಿ ಏನೆಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಆಡಳಿತ ಮಂಡಳಿಯಿಂದ ಹೆಬ್ಬಾಳೆ ಸೇತುವೆಯನ್ನ ದುರಸ್ಥಿ ಮಾಡಲಾಗಿದೆ. ಸೇತುವೆಯಲ್ಲಿ ಎಲ್ಲೆಲ್ಲಿ ಕಿತ್ತು ಹೋಗಿತ್ತೋ ಅಲ್ಲೆಲ್ಲಾ ದೇವಸ್ಥಾನದ ವತಿಯಿಂದ ಸಿಮೆಂಟ್ ಕಾಂಕ್ರೀಟ್ ಹಾಕಿಸಿ, ಭಕ್ತರು ಹಾಗೂ ಪ್ರವಾಸಿಗರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.