ಬಾಗಲಕೋಟೆ : ಲೋಕಸಭಾ ಚುನಾವಣಾ ಹಿನ್ನೆಲೆ ವಿಜಯ ಸಂಕಲ್ಪ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಜಯಪುರ ಮತ್ತು ಬಾಗಲಕೋಟೆ ಕ್ಷೇತ್ರಗಳ ಆತ್ಮೀಯ ಬಂಧು ಭಗಿನಿಯರೇ ನಿಮಗೆಲ್ಲರಿಗೂ ಚೌಕಿದಾರ ನರೇಂದ್ರ ಮೋದಿಯ ನಮಸ್ಕಾರಗಳು ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ್ದು, ಇಲ್ಲಿನ ಹಿರಿಯರು ಹಾಗೂ ಪೂಜ್ಯರಿಗೆ ನನ್ನ ನಮನಗಳು. ಈ ಭೂಮಿ ಬಸವಣ್ಣನವರನ್ನು ಈ ದೇಶಕ್ಕೆ ಕೊಡುಗೆಯಾಗಿ ನೀಡಿದ್ದು, ಅನುಭವ ಮಂಟಪದಂತಹ ಕೊಡುಗೆಯನ್ನು ಈ ದೇಶಕ್ಕೆ ಕೊಟ್ಟಿದ್ದಾರೆ. 5 ವರ್ಷದಲ್ಲಿ ಏನೆಲ್ಲ ಅಭಿವೃದ್ಧಿ ಆಗಿದೆಯೋ ಅದಕ್ಕೆಲ್ಲ ನೀವೇ ಕಾರಣ. ಹಲವು ಕಠಿಣ ತೀರ್ಮಾನವನ್ನು ತೆಗೆದುಕೊಳ್ಳಲು ನೀವು ಕಾರಣರಾಗಿದ್ದೀರಿ. ವಿಶ್ವದ ಅತಿ ದೊಡ್ಡ ಯೋಜನೆಯಾದ ಆಯುಷ್ಮಾನ್ ಯೋಜನೆಯಡಿ ರೈತರು ಹಾಗೂ ಜನಸಾಮಾನ್ಯರಿಗೆ 5 ಲಕ್ಷದ ವರೆಗೂ ಉಚಿತ ಆರೋಗ್ಯ ತಪಾಸಣೆ ಯೋಜನೆಯನ್ನು ನೀಡಿದ್ದೇವೆ. ಆದಾಯ ತೆರಿಗೆಯಲ್ಲಿ 5ಲಕ್ಷದ ಮಿತಿಯನ್ನು ಸಡಿಲಗೊಳಿಸಿದ್ದೇವೆ. 2009ರಲ್ಲಿ ಮುಂಬೈ ಉಗ್ರರ ದಾಳಿ ಬಳಿಕ ಚುನಾವಣೆ ನಡೆದಿತ್ತು. ಅಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್, ದಾಳಿಯಲ್ಲಿ ಪಾಕಿಸ್ತಾನ ಭಾಗಿಯಾಗಿದೆ ಎಂದು ಪಾಕ್ ಒಪ್ಪುವಂತೆ ಮಾಡಿದ್ದೇವೆ ಎಂದು ಪ್ರಣಾಳಿಕೆಯಲ್ಲಿ ಬರೆದುಕೊಂಡಿತ್ತು. ಅದೇ ಅವರು ಮಾಡಿದ ದೊಡ್ಡ ಸಾಧನೆ ಅಂದುಕೊಂಡಿದ್ದರು. ಪುಲ್ವಾಮ ದಾಳಿ ನಂತರ ನಾವು ಗಡಿಯನ್ನು ದಾಟಿ ಉಗ್ರರನ್ನು ಕಾರ್ಯಾಚರಣೆ ಮಾಡಿಸಿದ್ದೇವೆ. ಇದಕ್ಕೆಲ್ಲ ಕಾರಣ ಪ್ರಾಮಾಣಿಕತೆ ಮತ್ತು ಸ್ಪಷ್ಟ ನೀತಿಯಿಂದಾಗಿ ಆಗಿದೆ. ಇದರ ಪರಿಣಾಮ ಪಾಕಿಸ್ತಾನ ವಿಶ್ವದಲ್ಲಿಯೇ ಕಣ್ಣೀರು ಹಾಕುತ್ತಿದೆ. ಹೋದ ಕಡೆಯೆಲ್ಲ ಮೋದಿ ನಮ್ಮ ಮೇಲೆ ದಾಳಿ ಮಾಡುತ್ತಾರೆ ನಮ್ಮನ್ನು ರಕ್ಷಿಸಿ ಎಂದು ಸಹಾಯ ಕೇಳುತ್ತಿದ್ದಾರೆ. ಸರ್ಜಿಕಲ್ ಸ್ಟ್ರೈಕ್ ಹಾಗೂ ಏರ್ ಸ್ಟ್ರೈಕ್ ನಮ್ಮ ಸಾಧನೆಯ ಒಂದು ಮೆಟ್ಟಿಲು ಎಂದು ಹೇಳಿದರು.
ಪಾಕಿಸ್ತಾನದ ವೈರಿಗಳು ಸತ್ತರೆ, ನಮ್ಮವರು ಅಳಲು ಆರಂಭಿಸಿದರು. ಗೂಗಲ್ ಮುಂದೆ ಕುಳಿತು ಬಾಲಕೋಟ್ ಭಾರತದಲ್ಲಿದೆ ಎಂದು ಹೇಳಿದರು. ಅವರಿಗೆ ಬಾಲಕೋಟ್ ಮತ್ತು ಬಾಗಲಕೋಟೆಯ ವ್ಯತ್ಯಾಸವು ಗೊತ್ತಾಗಲಿಲ್ಲ. 5ವರ್ಷದ ಹಿಂದೆ ನಾನು ಜಮಖಂಡಿಗೆ ಬಂದಾಗ ನೀವು ನಿಮ್ಮ ಆಶೀರ್ವಾದ ಹಾಗೂ ಪ್ರೀತಿಯನ್ನು ನನಗೆ ಕೊಟ್ಟಿದ್ದೀರ. ನಾನು ಆಗ ಕರ್ನಾಟಕದ ಅಭಿವೃದ್ಧಿ ಅಜೆಂಡಾದೊಂದಿಗೆ ಬಂದಿದ್ದೆ, ಆದರೆ ಈಗಾ ನಾನು ನವಭಾರತಕ್ಕಾಗಿ ಸಹಕಾರ ಕೊಡುವಂತೆ ಕೇಳಲು ಬಂದಿದ್ದೇನೆ. ಕಾಂಗ್ರೆಸ್ 2014ರಲ್ಲಿ ಒಂದು ವರ್ಷದಲ್ಲಿ ಕುಟುಂಬಕ್ಕೆ 12 ಸಿಲಿಂಡರ್ ಕೊಟ್ಟಿದ್ದೇವೆ ಎಂದು ಹೇಳಿದ್ದರು. ಆದರೆ ಚೌಕಿದಾರನ ಸರ್ಕಾರ 24 ಲಕ್ಷ ಬಡವರಿಗೆ ಎಲ್ಪಿಜಿ ಸಿಲಿಂಡರ್ ಉಚಿತವಾಗಿ ಕೊಟ್ಟಿದೆ ಎಂದು ತಿಳಿಸಿದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿದಂತೆ ಘಟಬಂಧನ್ ರಾಷ್ಟ್ರ ಹಿತಕ್ಕಾಗಿ ಮಾಡಿಕೊಂಡಿಲ್ಲ, ಕೇವಲ ಅವರ ಮತಬ್ಯಾಂಕ್ಗಾಗಿ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.










