ಚೆನ್ನೈ: ತಮಿಳು ನಟಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚೆನ್ನೈನ ವಾಲಾಸರವಕ್ಕಂನಲ್ಲಿ ನಡೆದಿದೆ.ರಿಯಾಮಿಕಾ(26 ) ಆತ್ಮಹತ್ಯೆ ಮಾಡಿಕೊಂಡ ನಟಿ. ರಿಯಾಮಿಕಾ ತನ್ನ ಸಹೋದರ ಪ್ರಕಾಶ್ ರೊಂದಿಗೆ ವಲಸರವಕ್ಕಮ್ನ ಶ್ರೀದೇವಿ ಕುಪ್ಪಂ ಪ್ರದೇಶದಲ್ಲಿ ಬಾಡಿಗೆ ಮನೆಯೊಂದರಲ್ಲಿ ಕಳೆದ ನಾಲ್ಕು ತಿಂಗಳಿನಿಂದ ವಾಸವಿದ್ದರು ಎನ್ನಲಾಗಿದ್ದು, ಮಂಗಳವಾರ ರಾತ್ರಿ ಮನೆಗೆ ತಡವಾಗಿ ಆಗಮಿಸಿದ್ದಳು. ತುಂಬಾ ಬೇಸರದಲ್ಲಿ ಇರುವಂತೆ ಕಾಣುತ್ತಿದ್ದಳು. ಅದೇ ಕೊನೆ ಅವಳನ್ನು ನೋಡಿದ್ದು ಎಂದು ಪ್ರಕಾಶ್ ತಿಳಿಸಿದ್ದಾರೆ. ಮಂಗಳವಾರ ತಡರಾತ್ರಿ ರಿಯಾಮಿಕಾ ಅವರು ತಮ್ಮ ಸ್ನೇಹಿತ ದಿನೇಶ್ ಎಂಬುವವರಿಗೆ ಹಲವಾರು ಬಾರಿ ಫೋನ್ ಮಾಡಿದ್ದಾರೆ. ಆದರೆ ದಿನೇಶ್ ಫೋನ್ ರಿಸೀವ್ ಮಾಡಿರಲಿಲ್ಲ. ದಿನೇಶ್ ಮರುದಿನ ಬೆಳಗ್ಗೆ ರಿಯಾಮಿಕಾಗೆ ವಾಪಸ್ ಫೋನ್ ಮಾಡಿದಾಗ ರಿಯಾಮಿಕ ಫೋನ್ ರಿಸೀವ್ ಮಾಡಲಿಲ್ಲ. ತಕ್ಷಣ ದಿನೇಶ್ ರಿಯಾಮಿಕಾ ಮನೆಗೆ ಹೋಗಿ ಪ್ರಕಾಶ್ ಬಳಿ ಕೇಳಿದ್ದಾನೆ. ಪ್ರಕಾಶ್ ಹಾಗೂ ದಿನೇಶ್ ಕೊಠಡಿ ಬಳಿ ಸಾಕಷ್ಟು ಬಾರಿ ಬಾಗಿಲು ಬಡಿದಿದ್ದಾರೆ. ಆದರೆ ರಿಯಾಮಿಕಾತೆಗೆಯದಿದ್ದಾಗ ಪ್ರಕಾಶ್ ಕಿಟಕಿಯನ್ನು ಒಡೆದು ನೋಡಿದಾಗ ರಿಯಾಮಿಕಾ ನೇಣಿಗೆ ಶರಣಾಗಿರುವುದು ಕಂಡುಬಂದಿದೆ.ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ರಿಯಾಮಿಕಾ ಅವರ ಸಾವಿಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.










