ಮೂಡಿಗೆರೆ : ತೇಜಸ್ವಿ ಕೃತಿಗಳು ಯುವಪೀಳಿಗೆಯ ಮೇಲೆ ಬೀರಿದ ಪ್ರಭಾವ ದೊಡ್ಡದು ಎಂದು ತೇಜಸ್ವಿಯವರ ಪತ್ನಿ ರಾಜೇಶ್ವರಿ ತೇಜಸ್ವಿ ಹೇಳಿದರು. ಮೂಡಿಗೆರೆಯ ಕವಿಕಾವ್ಯ ಕಣಜ ಸಾಹಿತ್ಯ ಬಳಗ, ಕನ್ನಡ ಸಾಹಿತ್ಯ ಪರಿಷತ್ತು, ಪೀಸ್ ಅಂಡ್ ಅವರ್ನೇಸ್ ಟ್ರಸ್ಟ್, ಕನ್ನಡ ಜಾನಪದ ಪರಿಷತ್ತು ಹಾಗೂ ಮಿತ್ರ ಜಾನಪದ ಕಲಾ ಸಂಘದ ವತಿಯಿಂದ ತೇಜಸ್ವಿಯವರ ಮನೆ ನಿರುತ್ತರದಲ್ಲಿ ನಡೆದ ತೇಜಸ್ವಿ ನೆನಪಿನಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ತೇಜಸ್ವಿಯವರ ಹಲವು ಕೃತಿಗಳು ಸಿನಿಮಾಗಳಾಗಿವೆ. ಕೃತಿಯನ್ನು ಓದುವಾಗ ಸಿಗುವ ಅನುಭೂತಿಗೂ ಆ ಕೃತಿಯೂ ತೆರೆಯ ಮೇಲೆ ಕಂಡಾಗ ಆಗುವ ಅನುಭೂತಿಗೂ ವ್ಯತ್ಯಾಸವಿದೆ. ಸಿನಿಮಾ ಮಾಧ್ಯಮದ ಮಿತಿಗಳನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ನೋಡುವ ಅಗತ್ಯವಿದೆ ಎಂದರು.
ಕವಿಕಾವ್ಯ ಕಣಜ ಸಾಹಿತ್ಯ ಬಳಗದ ತಾಲ್ಲೂಕು ಅಧ್ಯಕ್ಷ ಎಂ.ಎಸ್.ನಾಗರಾಜ್ ಮಾತನಾಡಿ ತೇಜಸ್ವಿಯವರ ಕೃತಿಗಳು ಹೊಸ ಓದುಗರನ್ನು ಸಾಹಿತ್ಯಕ್ಷೇತ್ರಕ್ಕೆ ಪರಿಚಯಿಸಿವೆ. ಪ್ರತಿವರ್ಷವೂ ತೇಜಸ್ವಿ ಕೃತಿಗಳು ಮರುಮುದ್ರಣವಾಗುತ್ತಿರುವುದು ತೇಜಸ್ವಿಯವರ ಬರಹದ ಪ್ರಭಾವ ಯುವಫೀಳಿಗೆಯ ಮೇಲಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.
ಸಾಹಿತಿ ಡಾ.ಸಂಪತ್ ಬೆಟ್ಟಗೆರೆ ಮಾತನಾಡಿ ತೇಜಸ್ವಿ ಅವರ ಸಾಹಿತ್ಯವೂ ಓದುಗನಿಗೆ ಮಾರ್ಗದರ್ಶನ ಮಾಡುವಂತದ್ದಲ್ಲ. ಅದು ಓದುಗ ಆಲೋಚಿಸುವಂತೆ ಮಾಡುವ ಗುಣವುಳ್ಳದ್ದು. ತೇಜಸ್ವಿ ಅವರ ತಬರನ ಕಥೆ ನನ್ನ ಇಷ್ಟದ ಕಥೆ. ಆ ಕಥೆಯಲ್ಲಿನ ನಿರೂಪಣಾ ಶೈಲಿ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಕಲಾಪ್ರಜ್ಞೆ ಮತ್ತು ವಿಚಾರಪ್ರಜ್ಞೆ ಒಂದಾಗಿರುವ ತೇಜಸ್ವಿಯವರ ವ್ಯಕ್ತಿತ್ವ ವಿಶಿಷ್ಟ ಎಂದರು.
ಪೀಸ್ ಅಂಡ್ ಅರ್ವೇನೆಸ್ ಟ್ರಸ್ಟ್‍ನ ಸಂಸ್ಥಾಪಕಾ ಅಧ್ಯಕ್ಷ ಅಲ್ತಾಪ್ ಬಿಳುಗುಳ ಮಾತನಾಡಿ ಪರಿಸರದ ಬಗ್ಗೆ ಬೆರಗನ್ನು ಮೂಡಿಸಿ ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸಿಕೊಟ್ಟವರು ತೇಜಸ್ವಿ. ತೇಜಸ್ವಿಯವರ ಪರಿಸರದ ಕುರಿತ ಬರಹಗಳನ್ನು ಪ್ರತಿಯೊಬ್ಬರು ಓದಬೇಕು ಎಂದರು.
ತಾಲ್ಲೂಕು ಕಸಾಪ ಕಾರ್ಯದರ್ಶಿ ಲಕ್ಷ್ಮಣಗೌಡ, ಶಿಕ್ಷಕ ಆರ್ ಪ್ರಕಾಶ್, ಗಾಯಕ ಬಕ್ಕಿ ಮಂಜುನಾಥ್ ಮಾತನಾಡಿದರು.
ಪಿಎಚ್‍ಡಿ ಪದವಿ ಪಡೆದ ಸಂಪತ್ ಬೆಟ್ಟಗೆರೆ ಅವರನ್ನು ಸನ್ಮಾನಿಸಲಾಯಿತು. ಮಲೆನಾಡು ಕೋಗಿಲೆ ಬಕ್ಕಿ ಮಂಜುನಾಥ್ ಅವರ ಗಾಯನ ಗಮನ ಸೆಳೆಯಿತು.
ನಂತರ ಬೈದುವಳ್ಳಿ ಕ್ರಾಸ್ ರಸ್ತೆ ಇಬ್ಬದಿಯಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು. ಬೆಂಗಳೂರು, ಗುಲ್ಬರ್ಗ, ಬಾಳೆಹೊನ್ನೂರು, ಮೂಡಿಗೆರೆಯಿಂದ 30ಕ್ಕೂ ಹೆಚ್ಚು ಸಾಹಿತ್ಯಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶಿಕ್ಷಕರಾದ ಶಾಂತಕುಮಾರ್, ಭಕ್ತೇಶ್, ವಸಂತ್, ಕೃಷಿ ವಿಜ್ಞಾನಿ ಡಾ.ವಿಜಯಕುಮಾರ್, ಡಾ.ಶಿವಪ್ರಸಾದ್, ಲೇಖಕ ಮಣಿಕಂಠ ಬಿಳ್ಳೂರು, ನಾಜೀಮ್, ಪುಟ್ಟರಾಜು, ನವೀನ್, ಪಿ.ಕೆ.ಮಂಜುನಾಥ್, ವಿದ್ಯಾ, ಆಶಿಕ್ ಹಂಡುಗುಳ್ಳಿ, ನವೀನ್ ಕಣಚೂರು, ಅರುಣ್‍ಕುಮಾರ್, ರೋಹಿತ್, ಸಪ್ವಾನ್ ಬಿಳುಗುಳ, ನಂದೀಶ್ ಮುಂತಾದವರು ಇದ್ದರು.