ಮೂಡಿಗೆರೆ : ಸಂವಿಧಾನವನ್ನು ಸಂಸತ್ತಿನ ನಿರ್ಣಯಗಳಿಂದ ನಾಶ ಮಾಡಲು ಸಾಧ್ಯವಿಲ್ಲ – ಕೆ.ಆರ್.ರಮೇಶ್ ಕುಮಾರ್

647
firstsuddi

ಮೂಡಿಗೆರೆ : ಸಂವಿಧಾನವನ್ನು ಸಂಸತ್ತಿನ ನಿರ್ಣಯಗಳಿಂದ ನಾಶ ಮಾಡಲು ಸಾಧ್ಯವಿಲ್ಲ, ಆದರೆ ಸೂಕ್ಷ್ಮ ಸ್ವರೂಪಿಯಾದ ಸಂವಿಧಾನವನ್ನು ಸಂಸತ್ತಿನ ಸದಸ್ಯರ ಬಲದಿಂದ ನಾಶ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಮಾಜಿ ವಿಧಾನ ಸಭಾ ಅಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಹೇಳಿದರು.
ಪಟ್ಟಣದ ಡಾ.ಪಿ.ಎ.ಅಡ್ಯಂತಾಯ ರಂಗಮಂದಿರದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಸಂವಿಧಾನ ಸಂರಕ್ಷಣಾ ದಿನಾಚರಣೆ-2020 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದ ಅವರು, ಗಾಂಧೀಜಿಯವರನ್ನು ಹತ್ಯೆ ಮಾಡುವ 8 ದಿನಗಳ ಮುಂಚಿತವಾಗಿ ಸಂವಿಧಾನ ರಚನಾ ಸಮಿತಿಯು ಪ್ರಮುಖವಾದ 8 ನಿರ್ಣಯಗಳನ್ನು ಕೈಗೆತ್ತಿಗೊಂಡಿತ್ತು. ಅದರಲ್ಲಿ 5ನೇ ನಿರ್ಣಯದ ಪ್ರಕಾರ ಭಾರತ ದೇಶದ ಎಲ್ಲಾ ನಾಗರೀಕರಿಗೂ ಜಾತಿ ಮತ, ಲಿಂಗ ಭೇದವಿಲ್ಲದೆ ಎಲ್ಲರಿಗೂ ಸಮಾನವಾದ ಪ್ರಾಶಸ್ತ್ಯ ನೀಡಬೇಕು ಎಂದು ನಿರ್ಣಯಕ್ಕೆ ಬರಲಾಗಿತ್ತು. ಇಂತಹ ಹಲವು ಗಂಭೀರ ವಿಚಾರಗಳ ಬಗ್ಗೆ ಅವಲೋಕನ ಮಾಡದೆ ಪೌರತ್ವ ಕಾಯ್ದೆ ಜಾರಿಗೆ ತರುವಲ್ಲಿ ಉತ್ಸಾಹ ತೋರಿಸಿರುವುದು ಸರಿಯಲ್ಲ.
ನಾವು ಎಷ್ಟೇ ಆದರೂ ಭಾರತೀಯರು. ಸಹಜವಾಗಿ ನಮಗೆ ಸ್ವಾಮಿ ನಿಷ್ಟೆ ಕಡಿಮೆ. ಆದರೂ ಇಂದು ನಾವುಗಳು ಯಾವುದೇ ಸಿವಿಲ್ ತಕರಾರು ಅಥವಾ ನಮ್ಮಗಳ ತಲೆಗಳು ಚೂರಾಗದೆ ನೆಮ್ಮದಿಯಿಂದ ಜೀವ ಸಾಗಿಸುವಲ್ಲಿ ಪ್ರಮುಖವಾದ ಪಾತ್ರ ವಹಿಸುತ್ತಿರುವುದು ನಮ್ಮ ದೇಶದ ಸಂವಿಧಾನ. ಸ್ವಾತಂತ್ರ ಬಂದ ಸಂದರ್ಭದಲ್ಲಿ 544 ಹೋಳುಗಳಾಗಿ ಛಿದ್ರವಾಗಿದ್ದ ಒಕ್ಕೂಟಗಳನ್ನು ಒಂದಾಗಿಸಿ ಒಂದೇ ಆಡಳಿತದ ಅಡಿಯಲ್ಲಿ ದೇಶವನ್ನು ತರುವಲ್ಲಿ ಸಾಧ್ಯವಾಗಿದ್ದು ಇದೇ ಸಂವಿಧಾನದಿಂದ. ಇಂಥಹ ಸಂವಿಧಾನದ ಕತೃ ಡಾ.ಬಿ.ಆರ್. ಅಂಬೇಡ್ಕರ್ ವಿರುದ್ಧವೇ ಕೆಲವು ರಾಜಕೀಯ ಮುಖಂಡರುಗಳು ತಪ್ಪು ಹೇಳಿಕೆಗಳನ್ನು ನೀಡಿ ಅವರಿಗೆ ಅಪಮಾನ ಮಾಡುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ ಎಂಬುವುದನ್ನು ಎಲ್ಲರೂ ಒಟ್ಟಾಗಿ ಅವಲೋಕಿಸಿದರೆ ನಮ್ಮ ಮುಂದಿರುವ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು.
ಮಾತಿನ ನಡುವೆ ಸಹಜವಾಗಿ ಮಾದ್ಯಮದವರ ಕಾಲು ಎಳೆಯುತ್ತಾ ಮಾತನಾಡಿದ ಅವರು, ಮಾದ್ಯಮದವರು ದಯವಿಟ್ಟು ನಾನು ಹೇಳುತ್ತಿರುವುದನ್ನು ಮಾತ್ರ ಬರಯಿರಿ, ನನ್ನ ಮಾತಿಗೆ ನಾನು ಯಾವಾಗಲೂ ಬದ್ಧ ಆದರೆ, ನೀವು ಬರೆದ ಮಾತುಗಳಿಗೆ ಬದ್ಧನಾಗಿರಲು ಸಾಧ್ಯವಾಗುವುದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ನನ್ನನ್ನು ಟ್ರೋಲ್ ಮಾಡುವುದನ್ನು ನೋಡಿ ಸಾಕಾಗಿದೆ. ಇಲ್ಲಿ ಯಾರದ್ದು ತಪ್ಪು ಎನ್ನುವ ನಿರ್ಣಯ ಕೊಡಲು ನಾನು ಬಂದಿಲ್ಲ. ಹೊಸದಾಗಿ ಕಾರ್ಯರೂಪಕ್ಕೆ ತಂದಿರುವ ಕಾಯಿದೆಯಿಂದ ಜನಸಾಮಾನ್ಯನಿಗೆ ಆಗುವ ತೊಂದರೆಗಳ ಬಗ್ಗೆ ಮಾತ್ರ ಚರ್ಚಿಸಲು ಒಟ್ಟಿಗೆ ಸೇರಿದ್ದೇವೆ. ಬಿಜೆಪಿ ನಾಯಕರುಗಳು ಪ್ರಬುದ್ಧರಿದ್ದಾರೆ, ಆದರೆ ದೀರ್ಘವಾಗಿ ಆಲೋಚಿಸಿ ನಿರ್ಣಯ ಕೈಗೊಳ್ಳುವಲ್ಲಿ ಮಾತ್ರ ವಿಫಲರಾಗುತ್ತಿದ್ದಾರೆ. ಪೌರತ್ವ ಕಾಯಿದೆ ಜಾರಿಯಲ್ಲಿ ಹಲವು ಲೋಪದೋಷಗಳಿದ್ದು ಕೂಡಲೇ ಕಾಯ್ದೆಯನ್ನು ಹಿಂತೆಗೆದುಕೋಳ್ಳಬೇಕು ಎಂದು ಒತ್ತಾಯ ಮಾಡುತ್ತೇವೆ ಎಂದು ಹೇಳಿದರು.