ಅಲೆಮಾರಿ ಸಮುದಾಯದವರಿಗೆ ನಿವೇಶನ ಮತ್ತು ಮನೆ ನೀಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾಧಿಕಾರಿಗೆ ಮನವಿ…

296
firstsuddi

ಚಿಕ್ಕಮಗಳೂರು: ಕಳೆದ ಎರಡು ದಶಕಗಳಿಂದ ನಗರದಲ್ಲಿ ನೆಲೆಸಿರುವ ಅಲೆಮಾರಿ ಸಮುದಾಯದವರಿಗೆ ನಿವೇಶನ ಮತ್ತು ಮನೆ ನೀಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಅವರನ್ನು ಸೋಮವಾರ ಭೇಟಿ ಮಾಡಿದ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ಕಳೆದ 20 ವರ್ಷಗಳಿಂದ ಅಲೆಮಾರಿ ಜನಾಂಗದವರು ನಗರದ ವಿವಿದೆಡೆ ತಾತ್ಕಾಲಿಕ ಬಿಡಾರಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ, ಕಡುಬಡವರಾದ ಅವರು ಮನೆ ನಿರ್ಮಿಸಿ ಕೊಳ್ಳಲು ಶಕ್ತಿ ಇಲ್ಲದೆ ಚಳಿ, ಮಳೆ, ಗಾಳಿ ಮತ್ತು ಬಿರುಬಿಸಿಲಿನ ನಡುವೆ ಬದುಕುತ್ತಿದ್ದಾರೆ ಎಂದರು.
ಅಲೆಮಾರಿ ಜನಾಂಗಕ್ಕೆ ನಿವೇಶನ ಮತ್ತು ಮನೆ ನೀಡುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ಗುತ್ತಿಗೆ ಪೌರ ಕಾರ್ಮಿಕರ ನೇಮಕಾತಿಯಲ್ಲಿ ಜಿಲ್ಲೆಯಲ್ಲಿ ನೀತಿ ನಿಯಮಗಳನ್ನು ಉಲ್ಲಂಘಿಸುತ್ತಿರುವುದನ್ನು ತಡೆಗಟ್ಟಬೇಕು, ಅರ್ಹರಾದವರನ್ನು ನೇಮಕ ಮಾಡಿಕೊಳ್ಳಬೇಕು, ತರೀಕೆರೆ ತಾಲ್ಲೂಕು ದೋರನಾಳಿನ ಸರ್ವೆ ನಂ. 225 ರಲ್ಲಿ ಬಗರ್ ಹುಕುಂ ಸಾಗುವಳಿ ಮಾಡಿರುವ ದಲಿತರಿಗೆ ಭೂಮಿ ಮಂಜೂರಾತಿ ಮಾಡಲು ತಹಶೀಲ್ದಾರ್ ಅವರಿಗೆ ಆದೇಶ ನೀಡಬೇಕು ಎಂದು ಆಗ್ರಹಿಸಿದರು.
ತರೀಕೆರೆಯ ಪರಿಶಿಷ್ಟ ಜಾತಿಯ ರುದ್ರಭೂಮಿಗೆ ಸ್ನಾನ ಗೃಹ, ನೀರಿನ ವ್ಯವಸ್ಥೆ, ಹೈಮಾಸ್ಕ್ ದೀಪ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು, ತರೀಕೆರೆ ತಾಲ್ಲೂಕಿನ ಬರಗೇನಹಳ್ಳಿ ನಾಗರಾಜಪುರ ಹೊಸಹಳ್ಳಿ ಮತ್ತು ನಂದಿ ಗ್ರಾಮದಲ್ಲಿ ಸಾಗುವಳಿ ಮಾಡಿರುವ ದಲಿತರಿಗೆ ಬಗರ್ ಹುಕುಂ ಜಮೀನನ್ನು ಮಂಜೂರು ಮಾಡಿ ಖಾಯಂ ಸಾಗುವಳಿ ಪತ್ರ ನೀಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಸಂಚಾಲಕ ತರೀಕೆರೆ ಎನ್.ವೆಂಕಟೇಶ್, ಸಂಘಟನಾ ಸಂಚಾಲಕ ಚೌಡಪ್ಪ, ಖಜಾಂಚಿ ಜಿ.ರಾಜು, ತಾಲ್ಲೂಕು ಸಂಚಾಲಕ ಚಂದ್ರಪ್ಪ ಹಾಜರಿದ್ದರು.

firstsuddi