ಶೃಂಗೇರಿ ( ಚಿಕ್ಕಮಗಳೂರು ) : ಚುನಾವಣೆ ಹೊಸ್ತಿಲಲ್ಲಿ ದಿಢೀರನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯ ಶಾರದಾಂಭೆ ಪೀಠಕ್ಕೆ ಆಗಮಿಸಿರೋ ದೇವೇಗೌಡರು, ಪತ್ನಿ ಚನ್ನಮ್ಮ ಹಾಗೂ ಪುತ್ರ ರೇವಣ್ಣ ಅತಿ ಮಾಹಾರುದ್ರ ಯಾಗದಲ್ಲಿ ಪಾಲ್ಗೊಂಡಿರೋದು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಠಿಸಿದೆ. ಎರಡೂ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರ ನಡೆಸುತ್ತಿದ್ರೆ, ದೇವೇಗೌಡರು ಮಾತ್ರ 12 ದಿನಗಳ ಕಾಲ ಶಾರದಾಂಭೆಯ ಮಡಿಲಲ್ಲೇ ವಾಸ್ತವ್ಯ ಹೂಡಿ, ಯಾಗ ನಡೆಸ್ತಿರೋದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅತಿರುದ್ರ ಮಹಾಯಾಗದ ಶಕ್ತಿ ಅಂತಹದ್ದಾ ಎಂದು ನಾಡಿನ ಜನರಲ್ಲಿ ಹಾಗೂ ರಾಜಕೀಯ ಪಕ್ಷಗಳಲ್ಲಿ ಪ್ರಶ್ನೆ ಮೂಡಿದೆ. ಆದ್ರೆ, ದೇವೇಗೌಡರು ಮಾತ್ರ ರಾಜಕೀಯದಿಂದ ಸಂಪೂರ್ಣ ಹೊರತಾಗಿ ಯಾಗದ ಮೂಲಕ ಪಕ್ಷದ ಅಭಿವೃದ್ಧಿಗಾಗಿ ತಾಯಿ ಶಾರದಾಂಭೆಯ ಮೊರೆ ಹೋಗಿದ್ದಾರೆ.
ಇತಿಹಾಸದಲ್ಲಿ ಇಲ್ಲಿ ಅತಿರುದ್ರ ಮಹಾಯಾಗ ನಡೆಸಿರೋದು ಮಾಜಿ ಉಪರಾಷ್ಟ್ರಪತಿ ದೀನದಯಾಳ್ ಶರ್ಮಾ ಹಾಗೂ ರಾಜೀವ್ ಗಾಂಧಿ ಮಾತ್ರ. ಅವರನ್ನ ಹೊರತು ಪಡಿಸಿದ್ರೆ 40 ವರ್ಷಗಳ ಬಳಿಕ ಈ ಯಾಗ ನಡೆಯುತ್ತಿರೋದು ಇದೇ ಮೊದಲು. ಕುಮಾರಸ್ವಾಮಿ ಆರೋಗ್ಯ ಸಂಪೂರ್ಣ ಗುಣಮುಖವಾಗಿ, ಚುನಾವಣೆಗಾಗಿ ಪಕ್ಷಕ್ಕೆ ಶಕ್ತಿ ತುಂಬು ತಾಯೇ ಎಂದು ದೊಡ್ಡ ಗೌಡರು ಶಾರದಾಂಭೆಯ ಮೊರೆ ಹೋಗಿದ್ದಾರೆ. ಇಂದಿನಿಂದ 12 ದಿನಗಳ ಕಾಲ ನಡೆಯೋ ಯಾಗಕ್ಕೆ ಮಧ್ಯದಲ್ಲಿ ಒಂದು ಕುಮಾರಸ್ವಾಮಿ ಬರಲಿದ್ದು, ನಂತರ ಅಂತಿಮ ದಿನವಾದ 14ನೇ ತಾರೀಖಿನಂದು ದೊಡ್ಡಗೌಡರ ಕುಟುಂಬವೇ ಶೃಂಗೇರಿಯಲ್ಲಿ ಇರಲಿದೆ. ಈ ಯಾಗ ಮಾಡಿದ್ರೆ, ಮನಸ್ಸಿನ ಆಸೆ-ಆಕಾಂಕ್ಷೆಗಳು ಈಡೇರುತ್ತೆ ಅನ್ನೋದು ಭಕ್ತರ ನಂಬಿಕೆ. ಆದ್ರೆ, ದೇವೇಗೌಡರು ಎಂದು ಅವರಿಗಾಗಿ ಕೇಳಿಕೊಂಡವರಲ್ಲ. ರಾಜ್ಯ-ರಾಷ್ಟ್ರ ಹಾಗೂ ನಾಡಿಗೆ ಸಮೃದ್ಧ ಮಳೆ-ಬೆಳೆಯಾಗೋದ್ರ ಜೊತೆ ಮಗನ ಆರೋಗ್ಯಕ್ಕಾಗಿ ಈ ಯಾಗ ಮಾಡಿಸುತ್ತಿದ್ದಾರೆ ಅಂತಾರೆ ಅರ್ಚಕ ಅನಂತ ಸುಬ್ಬರಾಯ್.
ಇಂದಿನಿಂದ 12 ದಿನಗಳ ಕಾಲ ಶೃಂಗೇರಿಯಲ್ಲೇ ವಾಸ್ತವ್ಯ ಹೂಡಲಿರೋ ದೇವೇಗೌಡರು, ದಿನಂ ಪ್ರತಿ ಪೂಜೆ ಮುಗಿಯೋವರ್ಗೂ ಈ ಇಳಿ ವಯಸ್ಸಲ್ಲೂ ತಿಂಡಿ ಮಾಡುವುದಿಲ್ಲ. ಬೆಳಗ್ಗಿನ ಪೂಜೆ ಮುಗಿದ ಮೇಲೆಯೇ 12 ಗಂಟೆ ನಂತರವ ತಿಂಡಿ ಮಾಡೋದು. ಪತ್ನಿ ಚನ್ನಮ್ಮ ಕೂಡ. 150ಕ್ಕೂ ಅಧಿಕ ಅರ್ಚಕರು ಯಾಗ ನಡೆಸುತ್ತಿದ್ದ, ಯಾರೋಬ್ರು ಕೂಡ ಇಷ್ಟೆ ಸಂಭಾವನೆ ಬೇಕೆಂದು ಕೇಳುವುದಿಲ್ಲ. ಯಾಕಂದ್ರೆ, ದೇಶದ ಅಭಿವೃದ್ಧಿಗಾಗಿ ನಡೆಸುತ್ತಿರೋ ಯಾಗವಾದ್ರಿಂದ ಯಾರೂ ಸಂಭಾವನೆ ಕೇಳುವುದಿಲ್ಲ. 1952 ಹೊಳೆನರಸೀಪುರದಿಂದ ಶಾಸಕರಾದ ಎ.ಜಿ.ರಾಮಚಂದ್ರ ರಾಯರು ದೇವೇಗೌಡರ ರಾಜಕೀಯ ಗುರುಗಳು, ಅವರೇ ಇವರನ್ನ ಮೊದಲ ಬಾರಿಗೆ ಕರೆದುಕೊಂಡು ಬಂದದ್ದು, ಅಂದಿನಿಂದಲೂ ಮಠದ ಪರಮಭಕ್ತರಾಗಿರೋ ಗೌಡರು ವರ್ಷದಲ್ಲಿ ಹತ್ತಾರು ಬಾರಿ ಬಂದು ವಿಶೇಷ ಪೂಜೆ ಸಲ್ಲಿಸುತ್ತಾರಂತೆ.
ಚುನಾವಣೆ ಹೊಸ್ತಿಲಲ್ಲಿ ದೇವೇಗೌಡರ ಈ ಯಾಗ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಸೃಷ್ಠಿಸಿದೆ. 15 ದಿನಗಳ ಕಾಲ ಹೀಗೆ ಯಾಗ ಮಾಡ್ತಿದ್ರೆ ಪ್ರಚಾರ ಹೇಗೆಂದು ಚಿಂತಿಸ್ತಿರೋ ವಿರೋಧ ಪಕ್ಷಗಳ ನಾಯಕರು-ಕಾರ್ಯಕರ್ತರು, ಈ ಯಾಗಕ್ಕೆ ಅಷ್ಟೊಂದು ಶಕ್ತಿ ಇದ್ಯಾ ಎಂದು ವಿಚಾರಿಸ್ತಿದ್ದಾರೆ. ಆದ್ರೆ, ರಾಜಕೀಯ ಏನೇ ಇಲಿ. ನಮಗೆ ಅದು ಬೇಡ. ದೇವೇಗೌಡರಂತು ರಾಜಕೀಯದಿಂದ ಮುಕ್ತರಾಗಿ ಭಯ-ಭಕ್ತಿಯಿಂದ ಈ ಯಾಗ ನಡೆಸ್ತಿದ್ದಾರೆ. ಅವರ ಬಯಕೆಗಳೇನೆ ಇದ್ರು ಅವುಗಳೆಲ್ಲಾ ಈಡೇರಿ, ಅವುಗಳ ಜೊತೆ ನಾಡಿಗೆ ಸಮೃದ್ಧ ಮಳೆ-ಬೆಳೆಯಾಗಲೆಂದು ನಾವು ಆ ತಾಯಿಯ ಬಳಿ ಕೇಳಿಕೊಳ್ಳೋಣ.