ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಸರ್ಕಾರ ನಿರ್ಬಂಧ ಹೇರಬಾರದು : ಹೆಚ್.ಡಿ. ಕುಮಾರಸ್ವಾಮಿ.

177
firstsuddi

ಬೆಂಗಳೂರು : ದೇಶಾದ್ಯಂತ ಲಾಕ್‍ಡೌನ್ ಆಗಿರುವ ಹಿನ್ನೆಲೆ, ರೈತರು ಬೆಳೆದ ಬೆಳೆಗಳು ಬೆಲೆಯಿಲ್ಲದೆ ಹಾಗೂ ಮಾರಾಟವಾಗದೆ ಇರುವುದರಿಂದ ಕೆಲವು ಭಾಗಗಳಲ್ಲಿ ರೈತರು ತಾವು ಬೆಳೆದ ಬೆಳೆಗಳನ್ನು ತಿಪ್ಪೆಗಳಿಗೆ ಬಿಸಾಡುತ್ತಿದ್ದು, ಈ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಟ್ವಿಟರ್ ಮೂಲಕ ರೈತರ ಉತ್ಪನ್ನಗಳನ್ನು ಸರ್ಕಾರವೇ ಮುಂದೆನಿಂತು ಖರೀದಿಸಿ ಮಾರಾಟ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಕೊರೊನಾ ವೈರಸ್ ನಮ್ಮ ಮುಂದಿರುವ ಅಗೋಚರ ಯುದ್ಧ. ಇದರ ವಿರುದ್ಧ ಹೋರಾಡುವುದು ಇಂದಿನ ತುರ್ತು. ಆದರೆ ಯುದ್ಧ ನಡೆಯುವಾಗ ನಮ್ಮವರನ್ನು ರಕ್ಷಣೆ ಮಾಡಿಕೊಳ್ಳಬೇಕಿರುವುದೂ ನಮ್ಮ ಕರ್ತವ್ಯ. ಈ ಯುದ್ಧದ ನಡುವೆಯೂ ರೈತರನ್ನು ರಕ್ಷಿಸೋಣ. ಸಾರ್ವಜನಿಕರಿಗೆ ಅಗತ್ಯಗಳನ್ನು ಪೂರೈಸೋಣ. ಮಂಡ್ಯದಲ್ಲಿ ಸಪೋಟವನ್ನು ರಸ್ತೆಗೆ ಸುರಿದ, ಚಿಕ್ಕಬಳ್ಳಾಪುರದಲ್ಲಿ ದ್ರಾಕ್ಷಿಯನ್ನು ತಿಪ್ಪೆಗೆ ಹಾಕಿದ, ಶಿವಮೊಗ್ಗದಲ್ಲಿ ಹೈನುಗಾರರಿಂದ ಹಾಲು ನಿಲ್ಲಿಸಿದ, ಕೋಲಾರದಲ್ಲಿ ಟೊಮೆಟೊ ನಾಶ ಮಾಡಿದ ಘಟನೆಗಳು ರೈತರು ಎದುರಿಸುತ್ತಿರುವ ದುಸ್ಥಿತಿಯನ್ನು ವಿವರಿಸುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಇದು ವಿಕೋಪಗೊಳ್ಳುವ ಆತಂಕ ನನ್ನನ್ನು ಕಾಡುತ್ತಿದೆ. ಸರ್ಕಾರ ರೈತರ ಉತ್ಪನ್ನ ಖರೀದಿಗೆ ಶೀಘ್ರವೇ ವ್ಯವಸ್ಥೆ ಮಾಡುವ ಅನಿವಾರ್ಯತೆ ಎದುರಾಗಿದೆ. ಇಲ್ಲದೇ ಹೋದರೆ ಕೃಷಿ ವಲಯ ತೊಂದರೆಗೀಡಾಗುತ್ತದೆ. ಅದರ ಪರಿಣಾಮಗಳು ಭೀಕರ. ಇದು ಕುಟುಂಬಗಳನ್ನು ಆಪೋಷನ ತೆಗೆದುಕೊಳ್ಳುವ ಜೊತೆಗೆ, ಆರ್ಥಿಕತೆಗೆ ತೀವ್ರ ಪೆಟ್ಟು ನೀಡುತ್ತದೆ. ಅದನ್ನು ನೆನೆದು ನನಗಂತೂ ಆತಂಕವಾಗಿದೆ.
ಕೊರೊನಾ ವೈರಸ್ ರೋಗ ತಡೆಗೆ ಗ್ರಾಮಪಂಚಾಯಿತಿ, ವಾರ್ಡ್ ಮಟ್ಟದಲ್ಲಿ ಸ್ವಯಂಸೇವಕರು, ಸಂಘಸಂಸ್ಥೆಗಳು, ಅಧಿಕಾರಿಗಳ ಸಮಿತಿ ರಚನೆಯಾಗಬೇಕು ಎಂಬುದು ನನ್ನ ಸಲಹೆ. ಇದೇ ರೀತಿ ಹಾಪ್ ಕಾಮ್ಸ್, ಕೆಎಂಎಫ್ ಸೇರಿದಂತೆ ಸ್ವಯಂ ಸೇವಕರ ಗುಂಪುಗಳನ್ನು ಬಳಸಿಕೊಂಡು ರೈತರಿಂದ ಉತ್ಪನ್ನಗಳನ್ನು ಸರ್ಕಾರವೇ ಮುಂದೆ ನಿಂತು ಖರೀದಿಸಲಿ. ನಂತರ ಮಾರಾಟ ಮಾಡಲಿ. ರೈತರಿಂದ ನೇರವಾಗಿ ಖರೀದಿಸಿದ ಉತ್ಪನ್ನಗಳನ್ನು, ನಗರ ವಾರ್ಡ್ ಮಟ್ಟದಲ್ಲಿ ವಿತರಣೆ ಮಾಡಲು ವ್ಯವಸ್ಥೆ ಮಾಡಬೇಕು. ಮಾಲ್ ಗಳನ್ನೂ ಮೀರಿ ಸಾರ್ವಜನಿಕ ಅಗತ್ಯಗಳನ್ನು ಪೂರೈಸುತ್ತಿರುವುದು ಸಣ್ಣ ಪುಟ್ಟ ಅಂಗಡಿಗಳು. ರೈತರ ಉತ್ಪನ್ನಗಳನ್ನು ನೇರವಾಗಿ ಇಂತಹ ಅಂಗಡಿಗಳಿಗೆ ತಲುಪಿಸಲು ವ್ಯವಸ್ಥೆಯೊಂದನ್ನು ಸರ್ಕಾರ ಕೂಡಲೇ ಸೃಷ್ಟಿ ಮಾಡಬೇಕು. ಹಲವು ರೈತರು, ಕೃಷಿ ಉತ್ಪನ್ನ ಮಾರಾಟಗಾರರು ಈಗಾಗಲೆ ತಮ್ಮ ಪರಿಧಿಯಲ್ಲೇ ಸಾಗಾಟ, ವ್ಯಾಪಾರಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆದರೆ ಉತ್ಪನ್ನ ಸಾಗಿಸುವಾಗ ತಡೆಯುವ, ಅವರಿಂದ ದುಡ್ಡು ಕೇಳುತ್ತಿರುವ ಕುರಿತು ನನಗೆ ಮಾಹಿತಿ ಇದೆ. ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಸರ್ಕಾರ ನಿರ್ಬಂಧ ಹೇರಬಾರದು. ಇದು ರೈತರ ಬದುಕಿನ, ಜನರ ಆಹಾರದ ಪ್ರಶ್ನೆ ಎಂದು ಟ್ವೀಟ್ ಮಾಡಿದ್ದಾರೆ.