ಮೂಡಿಗೆರೆ : ಕೊರೋನಾ ಮಹಾ ಮಾರಿಯನ್ನು ಮಟ್ಟಹಾಕುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮಗಳನ್ನು ಮತ್ತಷ್ಟು ಬಿಗಿಯಾಗಿಸಿವೆ. ಆದರೆ ಕೆಲವು ಕಿಡಿಗೇಡಿಗಳ ಕಾಟದಿಂದಾಗಿ ಮಹಾ ಮಾರಿಯಿಂದ ಜನರನ್ನು ರಕ್ಷಣೆ ಮಾಡಲು ತಾಲ್ಲೂಕು ಆಡಳಿತ ಹಾಗೂ ಪೋಲೀಸ್ ಇಲಾಖೆ ಮುಂಜಾಗೃತಾ ಕ್ರಮವಾಗಿ ಮತ್ತಷ್ಟು ಭಿಗಿ ನಿಲುವನ್ನು ತೆಗೆದುಕೊಳ್ಳುವುದಾಗಿ ತಿಳಿಸಿದೆ.
ಈ ಬಗ್ಗೆ ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಮೂಡಿಗೆರೆ ಪೋಲಿಸ್ ವೃತ್ತ ನಿರೀಕ್ಷಕ ಹೆಚ್.ಪಿ.ಜಗನ್ನಾಥ್ ಅವರು, ಸಾರ್ವಜನಿಕರು ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡಂತೆ ಕಾಣುತ್ತಿಲ್ಲ. ಜಿಲ್ಲೆಯ ಇತರೆ ತಾಲ್ಲೂಕುಗಳಿಗೆ ಹೋಲಿಕೆ ಮಾಡಿದಲ್ಲಿ ಮೂಡಿಗೆರೆ ತಾಲ್ಲೂಕಿನಲ್ಲಿ ವಾಹನ ಸವಾರರ ಓಡಾಟ ಮಿತಿ ಮೀರುತ್ತಿದೆ. ಸಾರ್ವಜನಿಕ ಅಂತರ ಕಾಯ್ದುಕೊಳ್ಳುವಂತೆ ಎಷ್ಟೇ ಪರಿಪರಿಯಾಗಿ ಕೇಳಿಕೊಳ್ಳುತ್ತಿದ್ದರೂ ಕೆಲವರು ವಿನಾಕಾರಣ ಓಡಾಟ ನಡೆಸುತ್ತಿದ್ದಾರೆ. ಯಾವುದೋ ಮಾತ್ರೆಗಳ ಖಾಲಿ ಕವರ್‍ಗಳನ್ನು ಇಟ್ಟುಕೊಂಡು ಆಸ್ಪತ್ರೆ, ಮೆಡಿಕಲ್‍ಗಳಿಗೆ ಹೋಗುತ್ತಿರುವುದಾಗಿ ಸುಳ್ಳು ಹೇಳುತ್ತಿರುವುದು ಗಮನಕ್ಕೆ ಬಂದಿದೆ. ಇದಿಷ್ಟೇ ಅಲ್ಲದೆ ತರಕಾರಿ, ದಿನಸಿ, ಪೆಟ್ರೋಲ್ ಎಂದು ಕಾರಣಗಳನ್ನು ಹೇಳಿಕೊಂಡು ಪದೇ ಪದೇ ಪೋಲೀಸರನ್ನು ದಿಕ್ಕುತಪ್ಪಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಯಾರೋ ಕೆಲವರು ಮಾಡುವ ತಪ್ಪಿಗಾಗಿ ಮನೆಗಳಲ್ಲಿ ಇರುವ ನಾಗರೀಕರಿಗೆ ತೊಂದರೆ ಮಾಡಿದಂತಾಗುತ್ತದೆ. ಸಾರ್ವಜನಿಕರು ಇಂಥಹವರ ವಿಚಾರಗಳನ್ನು ವಾಹನ ಸಂಖ್ಯೆ ಸಮೇತ ಪೋಲಿಸ್ ಠಾಣೆಗೆ ತಿಳಿಸಿದಲ್ಲಿ ಇಂಥಹವರನ್ನು ಕಟ್ಟಿಹಾಕಲು ಅನುಕೂಲವಾಗುತ್ತದೆ. ಇಂದಿನಿಂದ ಕಡ್ಡಾಯವಾಗಿ ಹಗಲು ರಾತ್ರಿ ಎನ್ನದೆ ಎಲ್ಲಾ ವಾಹನಗಳ ತಪಾಸಣೆ ಮಾಡಲಾಗುವುದು. ಅನುಮಾನ ಬಂದವರನ್ನು ಪೋಲೀಸ್ ಠಾಣೆಗೆ ಕರೆದೊಯ್ದು ತಪಾಸಣೆ ನಡೆಸಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು. ಪೋಲೀಸರು ಸಾಧ್ಯವಾದಷ್ಟೂ ಶಾಂತ ರೀತಿಯಿಂದ ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದಾರೆ. ಅವರ ತಾಳ್ಮೆಯನ್ನು ಪರಿಶೀಲಿಸಲು ಹೋಗಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದಲ್ಲಿ ಬಿಳಗುಳ, ಬಸ್ ಸ್ಟಾಂಡ್ ಸರ್ಕಲ್ ಹಾಗೂ ಹ್ಯಾಂಡ್ ಪೋಸ್ಟ್ ಸರ್ಕಲ್ ಗಳಲ್ಲಿ ಬ್ಯಾರಿಕೇಡ್ ಹಾಕಿ ವಾಹನ ತಪಾಸಣೆ ನಡೆಸುತ್ತಿದ್ದೇವೆ. ಇಂದು ಡಿವೈಎಸ್‍ಪಿ ಅವರ ನೇತೃತ್ವದಲ್ಲಿ 15 ಬೈಕುಗಳು, 3 ಜೀಪ್ ಹಾಗೂ 3 ಕಾರುಗಳನ್ನು ಜಪ್ತಿ ಮಾಡಲಾಗಿದೆ. ನಾಳೆಯಿಂದ ಈ ಸಂಖ್ಯೆ ಹೆಚ್ಚಳವಾಗಬಾರದು ಎಂದರೆ ವಾಹನ ಸವಾರರು ಕಡ್ಡಾಯವಾಗಿ ಸಹಕರಿಸಬೇಕು. ಅಗತ್ಯ ವಸ್ತುಗಳ ಖರೀದಿಯನ್ನು ದಿನಕ್ಕೆ ಒಂದು ಬಾರಿ ಮಾಡಿಕೊಳ್ಳಬೇಕು, ಕಾರು ಬೈಕುಗಳಲ್ಲಿ ಒಬ್ಬರು ಮಾತ್ರ ತಿರುಗಾಡಬೇಕು. ಬೈಕುಗಳಲ್ಲಿ ಬರುವಾಗ ಕಡ್ಡಾಯವಾಗಿ ಮುಖಕ್ಕೆ ಮಾಸ್ಕ್ ಧರಿಸುವ ಜೊತೆಗೆ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು. ಕಾರುಗಳಲ್ಲಿ ತಿರುಗಾಡುವವರು ಸಹ ಒಬ್ಬರೇ ಬರಬೇಕು ಹಾಗೂ ಮಾಸ್ಕ್ ಧರಿಸಬೇಕು. ಅಂಗಡಿಗಳ ಬಳಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸಾಮಾಜಿಕ ಜವಾಬ್ದಾರಿಯನ್ನು ಮೆರೆಯಬೇಕು ಎಂದು ಮನವಿ ಮಾಡಿದರು.
ಸೋಂಕು ನಿಯಂತ್ರಣಕ್ಕಾಗಿ ಇಡೀ ದೇಶವೇ ಲಾಕ್ ಡೌನ್ ಆಗಿರುವುದರಿಂದ ಶೇ.90ರಷ್ಟು ಮಂದಿ ಮನೆಯಲ್ಲಿಯೇ ಇದ್ದಾರೆ. ಇದರಿಂದ ಹಲವರಿಗೆ ಮಾನಸಿಕ ಒತ್ತಡ ಉಂಟಾಗುವುದು ಸಹಜ. ಹಾಗೆಂದು ಒಂದು ಸುತ್ತು ಹಾಕಿಕೊಂಡು ಬರೋಣ ಎಂದು ಬರುವವರೇ ಜಾಸ್ತಿ. ಇಂಥಹ ಸೂಕ್ಷ್ಮ ಪರಿಸ್ಥಿತಿಯನ್ನು ಪೋಲಿಸ್ ಇಲಾಖೆ ಕೈಗೊಂಡಿರುವ ನಿರ್ಧಾರಕ್ಕೆ ಸಾರ್ವಜನಿಕ ವಲಯದಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಕೆಲವು ದಿನಗಳು ಮನೆಯಲ್ಲೇ ಇರುವುದು ಸೂಕ್ತ. ರಸ್ತೆಗೆ ಬಂದರೆ ಪೊಲೀಸರ ಲಾಠಿ ಏಟು ಗ್ಯಾರಂಟಿ.
Home ಸ್ಥಳಿಯ ಸುದ್ದಿ ಮೂಡಿಗೆರೆ : ಲಾಕ್‍ಡೌನ್ ಇನ್ನಷ್ಟು ಕಠಿಣ, ಅನಾವಶ್ಯಕವಾಗಿ ರಸ್ತೆಗೆ ಇಳಿಯುವ ವಾಹನಗಳ ಜಪ್ತಿ : ವೃತ್ತ...