ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ನಿನ್ನೆ ಸಭೆ ನಡೆದಿದ್ದು, ಸಭೆಯಲ್ಲಿ ಸಕ್ಕರೆ ಕಾರ್ಖಾನೆಗಳ ಮಾಲೀಕರು ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದ್ದಾರೆ. ದೇಶದಲ್ಲಿ ಪ್ರಸ್ತುತ 230 ಲಕ್ಷ ಟನ್ ಸಕ್ಕರೆ ದಾಸ್ತಾನು ಇದೆ. ಹೆಚ್ಚುವರಿ ಉತ್ಪಾದನೆ ಸಮಸ್ಯೆಯನ್ನು ಸರಿಪಡಿಸಲು ಕೇಂದ್ರ ಸರ್ಕಾರ ಕಬ್ಬಿನಿಂದ ಇಥೆನಾಲ್ ಉತ್ಪಾದನೆಗೆ ಪ್ರೋತ್ಸಾಹ ನೀಡುತ್ತಿದೆ. ಇದಲ್ಲದೆ ಎಫ್ಆರ್ ಪಿ ಪಾವತಿ ಸಂದರ್ಭದಲ್ಲಿ ಸಕ್ಕರೆ ಕಾರ್ಖಾನೆಗಳು ನಷ್ಟ ಅನುಭವಿಸಿದ ಸಂದರ್ಭದಲ್ಲಿ ನೆರವಾಗಲು ಸಕ್ಕರೆ ಸ್ಥಿರತೆಯ ನಿಧಿ ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ವಿವರಿಸಿದರು. ಇದಕ್ಕೆ ಪ್ರತಿಕ್ರಯಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಯವರು ಇದು ಸಕ್ಕರೆ ಕಾರ್ಖಾನೆ ಮಾಲೀಕರು ರೈತರೊಂದಿಗೆ ವಿಶ್ವಾಸದ ಮೇಲೆ ಮಾಡಿಕೊಂಡಿರುವ ಒಪ್ಪಂದ. ಆದ್ದರಿಂದ ಈ ಮೊತ್ತ ಪಾವತಿಸುವುದು ನಿಮ್ಮ ಬದ್ಧತೆ. ಕಾರ್ಖಾನೆ ಮಾಲೀಕರು ವ್ಯವಹಾರದಲ್ಲಿ ಆಗುವ ಏರುಪೇರುಗಳನ್ನು ಸರಿಪಡಿಸಿಕೊಳ್ಳುವ ಸಾಮರ್ಥ್ಯವಿರುತ್ತದೆ. ಆದರೆ ರೈತರು ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಬಾರದಿದ್ದರೆ ಸುಧಾರಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ರೈತರು ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಬಾರದಿದ್ದರೆ ಸುಧಾರಿಸಿಕೊಳ್ಳುವುದು ಕಷ್ಟ. ರೈತರ ಹಿತರಕ್ಷಣೆ ಸರ್ಕಾರದ ಕರ್ತವ್ಯವಾಗಿರುವುದರಿಂದ ರೈತರಿಗೆ ಸೂಕ್ತ ದರ ನೀಡುವಂತೆ ಕಾರ್ಖಾನೆ ಮಾಲೀಕರಿಗೆ ಕುಮಾರಸ್ವಾಮಿ ಅವರು ಸೂಚಿಸಿದ್ದಾರೆ. ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್, ಸಚಿವರಾದ ಬಂಡೆಪ್ಪ ಕಾಶೆಂಪೂರ, ರಮೇಶ್ ಜಾರಕಿಹೊಳಿ, ಶಿವಾನಂದ ಪಾಟೀಲ್, ಮಾಜಿ ಸಚಿವರುಗಳು, ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.










