ಚಿಕ್ಕಮಗಳೂರು:ಧರ್ಮ ಮಾರ್ಗದಲ್ಲಿ ನಡೆದರೆ ಮಾತ್ರ ಮನುಷ್ಯನ ಉನ್ನತಿ ಸಾಧ್ಯ ಎಂದು ಕೊಲ್ಕತ್ತ ಶಾರದಾ ಮಠ ಮತ್ತು ರಾಮಕೃಷ್ಣ ಮಿಷನ್‍ನ ಸಹಪ್ರಧಾನ ಕಾರ್ಯದರ್ಶಿ ಶ್ರೀ ಪ್ರವ್ರಾಜಿಕಾ ಜ್ಞಾನದಾ ಪ್ರಾಣಾ ಮಾತಾಜಿ ಹೇಳಿದರು.
ಇಲ್ಲಿನ ಆದಿಶಕ್ತಿನಗರದ ಶಾರದಾ ಮಠದಲ್ಲಿ ಗುರುವಾರ ಏರ್ಪಡಿಸಿದ್ದ ಆಧ್ಯಾತ್ಮ ಶಿಬಿರವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಅಧರ್ಮ ಮನುಷ್ಯರನ್ನು ಬಹಳ ಬೇಗ ಆಕರ್ಷಿಸುತ್ತದೆ, ಅಧರ್ಮಾಚರಣೆ ಅತ್ಯಂತ ಸುಲಭ ಆದರೆ ಆ ಮಾರ್ಗ ನಮ್ಮನ್ನು ಅಧಃಪತನದತ್ತ ಕೊಂಡೊಯ್ಯುತ್ತದೆ, ಧರ್ಮದ ಹಾದಿ ಕಠಿಣ ಆದರೆ ಆ ಮಾರ್ಗ ನಮ್ಮನ್ನು ಇಹ ಮತ್ತು ಪರದಲ್ಲೂ ಕಾಪಾಡುತ್ತದೆ ಎಂದರು.
ಅಧರ್ಮದ ಹಾದಿ ಆರಂಭದಲ್ಲಿ ಸಂತಸವನ್ನು ನೀಡಿದರೂ ನಂತರದಲ್ಲಿ ನಮ್ಮನ್ನು ಭ್ರಷ್ಟರನ್ನಾಗಿಸಿ ದುಃಖದ ಕೂಪಕ್ಕೆ ದೂಡುತ್ತದೆ ಧರ್ಮ ಮಾರ್ಗದಲ್ಲಿ ಸಾಗಿದವರು ಮಾತ್ರ ಮಹಾತ್ಮರಾಗಿದ್ದಾರೆ ಎಂದ ಅವರು ಎಲ್ಲರೂ ಇದನ್ನು ಅರಿಯಬೇಕು ಆಧ್ಯಾತ್ಮ ಜೀವಿಗಳಾಗಿ ಮತ್ತು ಸಾಧಕರಾಗಿ ತಮ್ಮ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಮಠದ ಅಧ್ಯಕ್ಷೆ ಶ್ರೀ ಪ್ರವ್ರಾಜಿಕಾ ಶುಭವ್ರತ ಪ್ರಾಣಾ ಮಾತಾಜಿ ಧರ್ಮಾಚರಣೆಯಿಂದ ಮಾತ್ರ ಸುಖ, ಸಂತಸ, ನೆಮ್ಮದಿ ದೊರೆಯುತ್ತದೆ ಎಂದು ತಿಳಿಸಿದರು.
ಬೆಂಗಳೂರಿನ ಜೈನ್ ಕಾಲೇಜಿನ ಉಪನ್ಯಾಸಕಿ ಮಂಜುಳಾ ಪ್ರವಚನ ನೀಡಿದರು, ಬೆಳಗಿನಿಂದ ಮಧ್ಯಾಹ್ನದವರೆಗೆ ನಡೆದ ಶಿಬಿರದಲ್ಲಿ ಸಾಮೂಹಿಕ ಧ್ಯಾನ, ಸ್ತ್ರೋತ್ರ ಪಾಠ, ಭಜನೆ ಜರುಗಿದವು.
ಶ್ರೀ ಪ್ರವ್ರಾಜಿಕಾ ಅಜಿತಪ್ರಾಣಾ, ಶಿವಪ್ರಿಯಪ್ರಾಣಾ ಮಾತಾಜಿ, ಬ್ರಹ್ಮಚಾರಿಣಿ ಡಾ|| ಅನ್ನಪೂರ್ಣ, ತರಳಬಾಳು ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಭಾರತಿ ಉಪಸ್ಥಿತರಿದ್ದರು.
Home ಸ್ಥಳಿಯ ಸುದ್ದಿ ಧರ್ಮ ಮಾರ್ಗದಲ್ಲಿ ನಡೆದರೆ ಮಾತ್ರ ಮನುಷ್ಯನ ಉನ್ನತಿ ಸಾಧ್ಯ:ಶ್ರೀ ಪ್ರವ್ರಾಜಿಕಾ ಜ್ಞಾನದಾ ಪ್ರಾಣಾ ಮಾತಾಜಿ…