ಬೆಂಗಳೂರು : 19 ವರ್ಷದ ಯುವತಿಯೊಂದಿಗೆ ಅಪ್ರಾಪ್ತ ಬಾಲಕನನ್ನು ಮದುವೆ ಮಾಡಿರುವ ಘಟನೆ ಅರೆಕೆರೆ ಮೈಕೋ ಲೇಔಟ್‍ನಲ್ಲಿ ನಡೆದಿದೆ. ಕಳೆದ ಕೆಲವು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಯುವತಿಗೆ ತಂದೆ ತಾಯಿ ಇಲ್ಲದ ಕಾರಣ 16 ವರ್ಷದ ಅಪ್ರಾಪ್ತ ಬಾಲಕನೊಂದಿಗೆ ಬಲವಂತವಾಗಿ ವಿವಾಹ ಮಾಡಿಸಲಾಗಿದೆ ಎನ್ನಲಾಗಿದ್ದು, ಈ ವಿಷಯ ತಿಳಿಯುತ್ತಿದ್ದಂತೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು ಯುವತಿಯನ್ನು ತನ್ನ ಸಂಬಂಧಿಕರಿಗೆ ಒಪ್ಪಿಸಿದ್ದಾರೆ. ಈ ಕುರಿತು ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಬಾಲ್ಯ ವಿವಾಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಬಲವಂತವಾಗಿ ಅಪ್ರಾಪ್ತ ಬಾಲಕನಿಗೆ ಮದುವೆ ಮಾಡಿಸಿದ ಪೋಷಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.










