ವಿಜಯಪುರ: ಪ್ರೀತಿಯನ್ನು ನಿರಾಕರಿಸಿದ್ದಕ್ಕೆ 14 ವರ್ಷದ ಅಪ್ರಾಪ್ತ ಬಾಲಕಿಯನ್ನು ಬೆಂಕಿ ಹಚ್ಚಿ ಸುಟ್ಟು ಕೊಂದಿರುವ ಘಟನೆ ಜಿಲ್ಲೆಯ ಕೋಟಾ ತಾಲೂಕಿನ ರತ್ನಾಪುರ ಗ್ರಾಮದಲ್ಲಿ ನಡೆದಿದೆ.ವಿವಾಹಿತ ವ್ಯಕ್ತಿ ಶಂಕರ ಹಿಪ್ಪರಕರ (24) ಹಾಗೂ ಮೋಹನ್ ಎಡವೆ (19) ಕೃತ್ಯ ಎಸಗಿರುವ ಆರೋಪಿಗಳು ಎನ್ನಲಾಗಿದ್ದು, ಇವರಿಬ್ಬರು ಬಾಲಕಿಗೆ ದಿನನಿತ್ಯ ಪ್ರೀತಿಸುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಬಾಲಕಿ ಪೋಷಕರಿಗೆ ತಿಳಿಸಿದ್ದಾಳೆ. ಇದಕ್ಕೆ ಪೋಷಕರು ಹೆದರಿ ಬಾಲಕಿಯನ್ನು ಶಾಲೆಗೆ ಕಳುಹಿಸದೆ ಮನೆಯಲ್ಲೇ ಇರಿಸಿದ್ದಾರೆ. ಬಾಲಕಿ ಪೋಷಕರಿಗೆ ವಿಷಯ ತಿಳಿಸಿದ್ದಾಳೆ ಎಂದು ಆಕ್ರೋಶಗೊಂಡ ವ್ಯಕ್ತಿ ಶಂಕರ ಹಿಪ್ಪರಕರ ಹಾಗೂ ಮೋಹನ್ ಎಡವೆ ಇಬ್ಬರು ಸೇರಿ ಬಾಲಕಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಂದಿದ್ದಾರೆ ಎನ್ನಲಾಗುತ್ತಿದೆ.ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.










