ಚಿಕ್ಕಮಗಳೂರು: ಸಾರ್ವಜನಿಕರು ಬ್ಯಾಂಕುಗಳಲ್ಲಿ ದೊರೆಯುವ ಸೌಲಭ್ಯಗಳನ್ನು ಬಳಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸಧೃಡರಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ ಸಲಹೆ ಮಾಡಿದರು.ನಗರದ ಕೆನರಾ ಬ್ಯಾಂಕಿನ ಪ್ರಾದೇಶಿಕ ಕಛೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಕ್ಯಾನ್ ಅದಾಲತ್, ಸಾಲ ಮರುಪಾವತಿ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ನಮ್ಮ ಪೂರ್ವಜರ ಕಾಲದಲ್ಲಿ ಶ್ರೀಸಾಮಾನ್ಯರಿಗೆ ಸಾಲ ಸಿಗುವುದು ಮರೀಚಿಕೆಯಾಗಿತ್ತು ಅದರಿಂದಾಗಿ ಅಂದಿನವರು ಆರ್ಥಿಕವಾಗಿ ಮೇಲೆ ಬರಲು ಸಾಧ್ಯವಾಗುತ್ತಿರಲಿಲ್ಲ ಆದರೆ ಇಂದು ಪರಿಸ್ಥಿತಿ ಬದಲಾಗಿದೆ ಬ್ಯಾಂಕುಗಳು ಸಾರ್ವಜನಿಕರ ಜೀವನಾಡಿಯಾಗಿವೆ, ಗೃಹಸಾಲ, ಶಿಕ್ಷಣ ಸಾಲ ಸೇರಿದಂತೆ ಅನೇಕ ಸೌಲಭ್ಯಗಳು ಬ್ಯಾಂಕುಗಳಲ್ಲಿ ದೊರೆಯುತ್ತಿವೆ, ಬಹಳಷ್ಟು ಸಾಲವನ್ನು ಕನಿಷ್ಠ ಬಡ್ಡಿ ದರದಲ್ಲಿ ನೀಡಲಾಗುತ್ತಿದೆ ಎಂದರು.ಸಾರ್ವಜನಿಕರು, ವಿಶೇಷವಾಗಿ ಗ್ರಾಮೀಣ ಭಾಗದ ಜನ ಮತ್ತು ಯುವಜನತೆ ಈ ಸೌಲಭ್ಯಗಳನ್ನು ಸಮಪರ್ಕವಾಗಿ ಬಳಸಿಕೊಳ್ಳಬೇಕು, ಸಾಲವನ್ನು ಸದ್ಭಳಕೆ ಮಾಡಿಕೊಳ್ಳುವ ಮೂಲಕ ಸ್ವಾವಲಂಬಿಗಳಾಗಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಯಾಂಕಿನ ಸಹಾಯಕ ಮಹಾಪ್ರಬಂಧಕ ಉಲ್ಲಾಸ್ ಕುಮಾರ್ ಗ್ರಾಹಕರು ಅದರಲ್ಲೂ ವಿಶೇಷವಾಗಿ ರೈತರಿಗೆ ಋಣಮುಕ್ತರಾಗಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ದಿವಿಜ ಬ್ಯಾಂಕ್‍ನ ಅಧ್ಯಕ್ಷ ಡಿ.ಹೆಚ್.ನಟರಾಜ್, ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಪಿ.ಮಂಜುನಾಥ ಜೋಷಿ, ಡಾ|| ಶ್ರೀನಿವಾಸ್ ಉಪಸ್ಥಿತರಿದ್ದರು.
ಬೆಳಗಿನಿಂದ ಸಂಜೆಯವರೆಗೆ ನಡೆದ ಕ್ಯಾನ್ ಅದಾಲತ್‍ನಲ್ಲಿ 200 ಗ್ರಾಮೀಣ ಭಾಗದ ಗ್ರಾಹಕರ ಪ್ರಕರಣಗಳನ್ನು ಇತ್ಯರ್ಥಗೊಳಿಸಿ 1.5 ಕೋಟಿ ರೂ ಸಾಲವನ್ನು ಮರುಪಾವತಿ ಮಾಡಿಕೊಳ್ಳಲಾಯಿತು.ಇದೇ ವೇಳೆ ಬ್ಯಾಂಕ್‍ನಲ್ಲಿ ದೊರೆಯುವ ಸೌಲಭ್ಯಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂಧಿ ನಗರದಲ್ಲಿ ಜಾಗೃತಿ ಜಾಥಾ ನಡೆಸಿದರು.