ಕೊಚ್ಚಿ: ಶಬರಿಮಲೆ ದೇವಾಲಯಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರು ಪ್ರವೇಶಿಸಬಹುದು ಎಂಬ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಶಬರಿಮಲೆ ದೇವಾಲಯದ ಬಾಗಿಲು ಇಂದು ಮೂರನೇ ಬಾರಿಗೆ ಪೂಜೆಗಾಗಿ ತೆರೆಯಲಾಗಿದ್ದು, ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿ ಅವರು ಶಬರಿಮಲೆ ದೇಗುಲಕ್ಕೆ ತೆರಳಲು ಇಂದು ಮುಂಜಾನೆ ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದ್ದಾರೆ. ಏರ್ಪೋರ್ಟ್ನ ಟ್ಯಾಕ್ಸಿ ಡ್ರೈವರ್ಗಳು ತೃಪ್ತಿ ದೇಸಾಯಿಯವರನ್ನು ಏರ್ಪೋರ್ಟ್ನಿಂದ ಹೊರಗೆ ಕರೆದುಕೊಂಡು ಹೋಗಲು ನಿರಾಕರಿಸಿದ್ದಾರೆ. ತೃಪ್ತಿ ದೇಸಾಯಿ ಅವರು ಶಬರಿಮಲೆ ದೇವಾಲಯ ಪ್ರವೇಶಿಸುವುದಕ್ಕೆ ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆ ಮುಂದುವರಿಸಿರುವ ಪ್ರತಿಭಟನಾಕಾರರು ತೃಪ್ತಿ ದೇಸಾಯಿಯನ್ನು ಹೊರ ಬರಲು ಬಿಡುವುದಿಲ್ಲ ಎನ್ನುವ ಘೋಷಣೆಗಳನ್ನು ಕೂಗುತ್ತ, ತೃಪ್ತಿ ದೇಸಾಯಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.










