ಇಂಗ್ಲೀಷ್ ವ್ಯಾಮೋಹದಿಂದಾಗಿ ರಾಜ್ಯದಲ್ಲಿ ಕನ್ನಡ ಕಣ್ಮರೆಯಾಗುತ್ತಿದೆ : ಕುಂದೂರು ಅಶೋಕ್….

301
firstsuddi

ಚಿಕ್ಕಮಗಳೂರು: ನಾಡಿನಲ್ಲಿ ಮಾತೃಭಾಷೆ ಉಳಿಯಬೇಕಾದರೆ ಖಾಸಗಿ ಸೇರಿದಂತೆ ಎಲ್ಲಾ ಶಾಲೆಗಳಲ್ಲೂ 5ನೇ ತರಗತಿಯವರೆಗೆ ಕನ್ನಡದಲ್ಲೇ ಶಿಕ್ಷಣ ನೀಡುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಜಾರಿಗೆ ತರಬೇಕು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ಸಲಹೆ ಮಾಡಿದರು.
ಜಾಗರ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾಲ್ಲೂಕಿನ ಶಿರವಾಸೆಯಲ್ಲಿ ಸೋಮವಾರ ನಡೆದ ಕನ್ನಡ ರಾಜ್ಯೋತ್ಸವದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಧುನೀಕರಣ, ಜಾಗತೀಕರಣ ಕನ್ನಡಿಗರ ಇಂಗ್ಲೀಷ್ ವ್ಯಾಮೋಹದಿಂದಾಗಿ ರಾಜ್ಯದಲ್ಲಿ ಕನ್ನಡ ಕಣ್ಮರೆಯಾಗುತ್ತಿದೆ ಎಂದು ವಿಷಾದಿಸಿದ ಅವರು ನಾಡಿನ ಜನತೆ ಸ್ವಾಭಿಮಾನ ಶೂನ್ಯರಾಗಿರುವ ಈ ಸಂದರ್ಭದಲ್ಲಿ 5ನೇ ತರಗತಿಯವರೆಗೆ ಕನ್ನಡದಲ್ಲೇ ಶಿಕ್ಷಣ ನೀಡುವ ಕಾನೂನನ್ನು ಜಾರಿಗೆ ತಂದರೆ ಮಾತ್ರ ರಾಜ್ಯದಲ್ಲಿ ಮಾತೃಭಾಷೆ ಉಳಿಯುತ್ತದೆ ಎಂದರು.
ರಾಜ್ಯ ಸರ್ಕಾರ ಈ ಸಂಬಂಧ ಕಾನೂನನ್ನು ಜಾರಿಗೆ ತರಬೇಕು ನಾಡಿನ ಜನತೆ ಸಹ ಏಕರೂಪ ಶಿಕ್ಷಣವನ್ನು ಜಾರಿಗೆ ತರುವಂತೆ ಹಕ್ಕೊತ್ತಾಯ ಮಂಡಿಸಬೇಕು ಎಂದು ಮನವಿ ಮಾಡಿದರು.
ಜಯಕರ್ನಾಟಕ ಜಿಲ್ಲಾಧ್ಯಕ್ಷ ಕೆ.ಆರ್.ಅನಿಲ್‍ಕುಮಾರ್ ಮಾತನಾಡಿ ರಾಜ್ಯದಲ್ಲಿ ಮಾತೃಭಾಷೆ ನಶಿಸುತ್ತಿರುವುದಕ್ಕೆ ಸರ್ಕಾರಿ ಶಾಲೆಗಳು ಮುಚ್ಚಿತ್ತಿರುವುದಕ್ಕೆ ಕನ್ನಡಿಗರೇ ಕಾರಣ ಎಂದರು.
10ನೇ ತರಗತಿಯವರೆಗೆ ಕನ್ನಡದಲ್ಲೇ ಶಿಕ್ಷಣ ನೀಡುವ ವ್ಯವಸ್ಥೆ ಜಾರಿಯಾದರೆ ಮಾತ್ರ ಮಾತೃಭಾಷೆ ಮುಂದಿನ ಪೀಳಿಗೆಗೆ ಉಳಿಯುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಾಗರ ಹೋಬಳಿ ಕಸಾಪ ಅಧ್ಯಕ್ಷ ಕಳವಾಸೆ ರವಿ ಕಾರ್ಯಕ್ರಮಕ್ಕೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ರಿಪ್ಪನ್‍ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ|| ಕೆ.ಶ್ರೀಪತಿ ಹಳಗುಂದ್, ಜಿ.ಪಂ.ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜೆಸಿಂತಾ ಅನಿಲ್ ಕುಮಾರ್, ಸದಸ್ಯೆ ಕವಿತಾ ಲಿಂಗರಾಜು, ಕಿರುತೆರೆ ನಟಿ ಗಾನವಿ ಲಕ್ಷ್ಮಣ್ ಸಾಹಿತಿ ಹೆಚ್.ಎಂ.ನಾಗರಾಜರಾವ್ ಮಾತನಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು, ರಾಜ್ಯೋತ್ಸವದ ಅಂಗವಾಗಿ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು, ಸಮಾರಂಭಕ್ಕೆ ಮುನ್ನ ಕನ್ನಡ ಭುವನೇಶ್ವರಿಯ ಭಾವಚಿತ್ರದ ಮೆರವಣಿಗೆ ವಿವಿಧ ಕಲಾ ತಂಡಗಳ ನಡುವೆ ನಡೆಯಿತು.
ಬೆಂಗಳೂರಿನ ಉದ್ಯಮಿ ಬಿ.ಎಂ.ರವಿಶಂಕರ್, ನ್ಯಾಯವಾದಿ ಎನ್.ಆರ್.ರವಿ, ಬಿ.ಸಿ.ಲೋಕೇಶ್, ಎಸ್.ಎಂ.ದೇವಣ್ಣಗೌಡ, ಗ್ರಾ.ಪಂ.ಅಧ್ಯಕ್ಷೆ ರೂಪ, ಬಿ.ಎ.ಶಿವಶಂಕರ್, ಎನ್.ಶ್ರೀಕಾಂತ್ ಶೆಟ್ಟಿ, ಕನ್ನಡಸೇನೆ ಅಧ್ಯಕ್ಷ ಪಿ.ಸಿ.ರಾಜೇಗೌಡ ಉಪಸ್ಥಿತರಿದ್ದರು.
ಪ್ರಸನ್ನ ಕಾರ್ಯಕ್ರಮವನ್ನು ನಿರೂಪಿಸಿದರು, ಜೆ.ಸಿ.ಲಕ್ಷ್ಮಣ್ ಸ್ವಾಗತಿಸಿದರು, ಬಾಲ ಮುರಳಿ ವಂದಿಸಿದರು, ಸಮಾರಂಭದ ನಂತರ ರಸಮಂಜರಿ ಕಾರ್ಯಕ್ರಮ ನಡೆಯಿತು.