ಶ್ರೀನಗರ : ಗಡಿ ನಿಯಂತ್ರಣ ರೇಖೆ ಬಳಿ ಪಾಕ್ ಸೇನೆ ನಡೆಸಿದ ಗುಂಡಿನ ದಾಳಿಗೆ ಭಾರತೀಯ ಸೇನೆಯ ಕಿರಿಯ ಸೇನಾದಿಕಾರಿ ಹುತಾತ್ಮರಾಗಿದ್ದಾರೆ. ಜಮ್ಮು ಕಾಶ್ಮೀರಾದ ರಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್ ನ ಬಾಬಖೋರಿಯಾ ಗಡಿ ನಿಯಂತ್ರಣ ರೇಖೆ ಬಳಿ ಪಾಕ್ ಸೇನೆಯು ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಪಾಕ್ ಸೇನೆಯ ಗುಂಡಿನ ದಾಳಿಯಿಂದ ಭಾರತೀಯ ಸೇನೆಯ ಕಿರಿಯ ಸೇನಾಧಿಕಾರಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದಾರೆ ಎಂದು ಸೇನಾ ಮೂಲಗಳಿಂದ ತಿಳಿದು ಬಂದಿದೆ.










