ಚಿಕ್ಕಮಗಳೂರು: ಇಂದಿನ ಯುವ ಪೀಳಿಗೆ ನಮ್ಮ ಕಲೆ, ಸಾಹಿತ್ಯ ಮತ್ತು ಸಂಸ್ಕøತಿಯನ್ನು ಮೈಗೂಡಿಸಿಕೊಳ್ಳುವ ಮೂಲಕ ನಾಡಿನ ಪರಂಪರೆ ಹಾಗೂ ಕನ್ನಡವನ್ನು ಮುಂದಿನ ಪೀಳಿಗೆಗೆ ಉಳಿಸಬೇಕು ಎಂದು ಜಿಲ್ಲಾ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷ ಎಸ್.ಎಸ್.ವೆಂಕಟೇಶ್ ಮನವಿ ಮಾಡಿದರು.ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕಿನ ಕಡಬಗೆರೆಯ ದಿ|| ಎ.ಕೆ.ಕೃಷ್ಣೇಗೌಡರ ಮನೆಯಂಗಳದಲ್ಲಿ ಭಾನುವಾರ ಏರ್ಪಡಿಸಿದ್ದ ಕಥಾ ಸಂಕೀರ್ತನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕನ್ನಡ ಎಂದರೆ ಬರೀ ಭಾಷೆಯಲ್ಲ, ಅದೊಂದು ಅಂತರಂಗದ ಮಾತು ನಮ್ಮ ಸಂಸ್ಕøತಿ ಮತ್ತು ಪರಂಪರೆ, ಕವಿಗಳು, ಸಾಹಿತಿಗಳು, ದಾಸರು, ವಚನಕಾರರು, ಜಾನಪದರು, ನಮ್ಮ ಹಿರಿಯರು ಬಹಳಷ್ಟು ಕಷ್ಟಪಟ್ಟು ಅದನ್ನು ಉಳಿಸಿ ಬೆಳೆಸಿದ್ದಾರೆ, ಅದನ್ನು ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.ಸ್ವಾಭಿಮಾನಕ್ಕೆ ಧಕ್ಕೆಯಾದ ಹಿನ್ನೆಲೆಯಲ್ಲಿ ಉದಯಿಸಿದ ನಮ್ಮ ನಾಡಿನಲ್ಲಿ ಇಂದು ಜನ ಸ್ವಾಭಿಮಾನ ಶೂನ್ಯರಾಗಿರುವುದು ದುರ್ದೈವದ ಸಂಗತಿ ಇದರಿಂದಾಗಿ ರಾಜ್ಯದಲ್ಲಿ ಕನ್ನಡ ನಶಿಸುತ್ತಿದೆ, ನೆಲ, ಜಲ, ಸಂಸ್ಕøತಿ ಪರಂಪರೆ ನಾಶವಾಗುತ್ತಿದೆ ಎಂದು ವಿಷಾದಿಸಿದರು.ಇಂದಿನ ಯುವ ಪೀಳಿಗೆ ಈಗಲಾದರೂ ಎಚ್ಚೆತ್ತು ನಮ್ಮ ಸಾಹಿತ್ಯ, ಸಂಸ್ಕøತಿ, ಸಂಗೀತ ಮತ್ತು ಕಲೆಯನ್ನು ಮೈಗೂಡಿಸಿಕೊಂಡರೆ ನಮ್ಮ ನಾಡು, ನುಡಿ, ನೆಲ, ಜಲ ಮುಂದಿನ ಪೀಳಿಗೆಗೆ ಉಳಿಯುತ್ತದೆ ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಯಜ್ಞಪುರುಷಭಟ್ ಮಾತನಾಡಿ ಕನ್ನಡಿಗರು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಇಂಗ್ಲೀಷ್ ಭಾಷೆಯನ್ನು ಕಲಿಯಬೇಕು ಆದರೆ ಅದರ ನೆಪದಲ್ಲಿ ನಮ್ಮತನವನ್ನು ಮರೆಯಬಾರದು ಎಂದು ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ನಮ್ಮ ನಾಡು, ನುಡಿ ಮತ್ತು ಸಂಸ್ಕøತಿಯನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರೂ ತ್ಯಾಗಿಗಳಾಗಬೇಕು, ರಾಜ್ಯದಲ್ಲಿ ಕನ್ನಡ ಉಳಿಯಬೇಕಾದರೆ ಕನ್ನಡಿಗರು ತಮ್ಮ ಮಕ್ಕಳನ್ನು ಕನಿಷ್ಠ 5ನೇ ತರಗತಿಯವರೆಗಾದರೂ ಸರ್ಕಾರಿ ಶಾಲೆಯಲ್ಲಿ ಓದಿಸಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಕಸಾಪ ಸಂಚಾಲಕ ಕೆ.ಟಿ.ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಜಿಲ್ಲೆಯ ಹಿರಿಯ ಸಂಕೀರ್ತನಕಾರ ಜಾಳ್ಮರ ಸುಬ್ಬರಾವ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು, ಇತ್ತೀಚೆಗೆ ನಡೆದ ಕ್ರೀಡಾಕೂಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಜಾಳ್ಮರ ಸುಬ್ಬರಾವ್ ಅವರಿಂದ ಕಥಾ ಸಂಕೀರ್ತನೆ ನಡೆಯಿತು, ಖಾಂಡ್ಯ ಹೋಬಳಿ ಕಸಾಪ ಅಧ್ಯಕ್ಷ ಎಸ್.ಪೇಟೆ ಸತೀಶ್, ಜಿಲ್ಲಾ ಕಾರ್ಯದರ್ಶಿ ಡಿ.ಎಂ.ಮಂಜುನಾಥ ಸ್ವಾಮಿ, ಕಾಂಗ್ರೇಸ್ ಅಧ್ಯಕ್ಷ ಬಿ.ಎನ್.ಸೋಮೇಶ್, ಬಿಜೆಪಿ ಅಧ್ಯಕ್ಷ ಹೆಚ್.ಎಸ್.ರವಿ, ಯಶೋಧಮ್ಮ ಕೃಷ್ಣೇಗೌಡ ಉಪಸ್ಥಿತರಿದ್ದರು.ಎನ್.ಸಿ.ಸುಬ್ರಹ್ಮಣ್ಯ ಕಾರ್ಯಕ್ರಮವನ್ನು ನಿರೂಪಿಸಿದರು, ಸಾಹಿತಿ ಹುಣಸೇಹಳ್ಳಿ ರಾಜಪ್ಪಗೌಡ ಸ್ವಾಗತಿಸಿದರು, ಎ.ಕೆ.ಸಂದೇಶ್ ವಂದಿಸಿದರು.










