ಶ್ರೀನಗರ : ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಸೈನಿಕರು ನಡೆಸಿದ ಶೆಲ್ ದಾಳಿಗೆ ಭಾರತೀಯ ಸೇನೆಯ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಜಮ್ಮು ಕಾಶ್ಮೀರಾದ ಕುಪ್ವಾರಾ ಜಿಲ್ಲೆಯ ನೌಗಮ್ ಸೆಕ್ಟರ್ ಬಳಿ ಪಾಕಿಸ್ತಾನ ಸೈನಿಕರು ಭಾರತೀಯ ಸೈನಿಕರನ್ನು ಗುರಿಯಾಗಿಸಿಕೊಂಡು ಮೋರ್ಟರ್ ಬಳಸಿ ಗುಂಡಿನ ದಾಳಿ ನಡೆಸಿದ್ದು, ಪಾಕ್ ಸೈನಿಕರ ಗುಂಡಿನ ದಾಳಿಗೆ ಇಬ್ಬರು ಭಾರತೀಯ ಯೋಧರು ಹುತಾತ್ಮರಾಗಿದ್ದು, ನಾಲ್ವರು ಯೋಧರು ಗಾಯಗೊಂಡಿದ್ದು, ಅವರನ್ನು ಸೇನಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳದಲ್ಲಿ ಪಾಕ್ ಯೋಧರ ದಾಳಿಗೆ ಭಾರತೀಯ ಯೋಧರು ತಕ್ಕ ಪ್ರತ್ಯುತ್ತರ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇಂದು ಬೆಳಿಗ್ಗೆ ಕೂಡಾ ಜಮ್ಮು ಕಾಶ್ಮೀರಾದ ರಜೌರಿ ಸೆಕ್ಟರ್ ಬಳಿ ಪಾಕ್ ಯೋಧರು ಕದನ ವಿರಾಮ ಉಲ್ಲಂಘಿಸಿ ನಡೆಸಿದ ಗುಂಡಿನ ದಾಳಿಗೆ ಓರ್ವ ಭಾರತೀಯ ಯೋಧ ಹುತಾತ್ಮರಾಗಿದ್ದರು. ಹಾಗೂ ಓರ್ವ ಯೋಧ ಗಾಯಗೊಂಡಿದ್ದರು. ಇದರೊಂದಿಗೆ ಇಂದು ಮೂವರು ಯೋಧರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದು, ಐವರು ಯೋಧರು ಗಾಯಗೊಂಡಿದ್ದಾರೆ.










