ಪ್ರಧಾನಿ ಮೋದಿ ಅವರೊಂದಿಗೆ ಸಂವಾದ ನಡೆಸಲು ತುಮಕೂರಿನ ಇಬ್ಬರು ವಿದ್ಯಾರ್ಥಿಗಳು ಆಯ್ಕೆ…

182
firstsuddi

ತುಮಕೂರು : ಜ.20ರಂದು ದೆಹಲಿಯಲ್ಲಿ ನಡೆಯಲಿರುವ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಂವಾದ ನಡೆಸಲು ತುಮಕೂರಿನ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಜಿಲ್ಲೆಯ ಶಿರಾ ತಾಲ್ಲೂಕಿನ ಚಿಕ್ಕನಹಳ್ಳಿ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಸಾಗರ್, ಹಾಗೂ ಚಂಗಾವರ ಪ್ರೌಢ ಶಾಲೆಯ ವಿದ್ಯಾರ್ಥಿನಿ ದೀಪಿಕಾ. ಆರ್ ಸಂವಾದ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿ ಸಾಗರ್ ತಂದೆ ಆಟೋ ಚಾಲಕರಾಗಿದ್ದು, ವಿದ್ಯಾರ್ಥಿನಿ ದೀಪಿಕಾ ಅವರ ತಂದೆ ರೈತರಾಗಿದ್ದು, ಇಬ್ಬರೂ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವುದರಿಂದ ಇಬ್ಬರ ಕುಟುಂಬದವರಲ್ಲಿ ಸಂಭ್ರಮ ಮನೆ ಮಾಡಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಿದ್ಯಾರ್ಥಿ ಸಾಗರ್ ಪ್ರಧಾನಿ ಮೋದಿ ಅವರೊಂದಿಗೆ ಸಂವಾದ ನಡೆಸಲು ಆಯ್ಕೆಯಾಗಿರುವುದು ನನಗೆ ಬಹಳ ಸಂತೋಷವಾಗಿದೆ. ನಾನು ಪ್ರಧಾನ ಮಂತ್ರಿಗಳ ಎದುರು ಮಕ್ಕಳು ಮೊಬೈಲ್ ಬಳಕೆ ಮಾಡುವುದು ಎಷ್ಟು ಸರಿ? ಮಕ್ಕಳ ಕೈಗೆ ಮೊಬೈಲ್ ಕೊಡದಂತೆ ನೋಡಿಕೊಳ್ಳುವುದು ಹೇಗೆ? ಎಂದು ಕೇಳುತ್ತೇನೆ ಹಾಗೂ ಗ್ರಾಮೀಣ ಪ್ರದೇಶದ ಶಾಲೆಗಳ ಸ್ಥಿತಿಗತಿ ಬಗ್ಗೆ ತಿಳಿಸುತ್ತೇನೆ ಎಂದು ಹೇಳಿದ್ದಾರೆ.

ಬಳಿಕ ಮಾತನಾಡಿದ ವಿದ್ಯಾರ್ಥಿನಿ ದೀಪಿಕಾ ಪ್ರಧಾನಿ ಮೋದಿ ಅವರ ಭೇಟಿಗೆ ಅವಕಾಶ ಸಿಕ್ಕಿರುವುದು ಖುಷಿ ತಂದಿದೆ. “ಬೇಟಿ ಪಡಾವೋ ಬೇಟಿ ಬಚಾವೋ” ಕಾರ್ಯಕ್ರಮದಂತೆ ಹೆಣ್ಣು ಮಕ್ಕಳಿಗಾಗಿ ಮತ್ತಷ್ಟು ಕಾರ್ಯಕ್ರಮವನ್ನು ರೂಪಿಸುವಂತೆ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.