ಪಿಂಜಾರ ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪನೆಗೆ ಒತ್ತಾಯ…

614
firstsuddi

ಚಿಕ್ಕಮಗಳೂರು : ಪಿಂಜಾರ, ನದಾಫ, ಮತ್ತು ಮನ್ಸೂರಿ ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪನೆ ಮಾಡಬೇಕೆಂದು ಕರ್ನಾಟಕ ಪಿಂಜಾರ ನದಾಫ್ ಮನ್ಸೂರಿ ಸಂಘಗಳ ಮಹಾ ಮಂಡಳದ ರಾಜ್ಯಾಧ್ಯಕ್ಷರಾದ ಅಬ್ದುಲ್ ರಜಾಕ್ ನದಾಫ್‍ರವರು ಒತ್ತಾಯಿಸಿದರು.ಅವರು ಇಂದು ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಗಳ ಮೂಲಕ ಮನವಿ ಪತ್ರವನ್ನು ನೀಡಿ ಮಾತನಾಡುತ್ತ, ರಾಜ್ಯದಲ್ಲಿ ಪಿಂಜಾರ, ನದಾಫ್, ಸಮುದಾಯವು ಒಂದು ಉತ್ಪಾದನಾ ಚಟುವಟಿಕೆಯ ಮೂಲಕ ಆರ್ಥಿಕ ಲಕ್ಷಣಗಳನ್ನು ತನ್ನ ಅನನ್ಯತೆಯಲ್ಲಿ ಮೈಗೂಡಿಸಿಕೊಂಡಿದೆ. ಆದರೆ ಇಂದು ನಮ್ಮ ಸಮುದಾಯವು ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿದಿರುವುದು ದುರಾದೃಷ್ಟಕರ. ರಾಜ್ಯದ ವಿವಿಧ ಮೂಲೆಗಳಲ್ಲಿ ಹರಿದು ಹಂಚಿಹೋಗಿರುವ ನಮ್ಮ ಸಮುದಾಯಕ್ಕೆ ಆಧುನಿಕತೆಯ ಭರಾಟೆಯಿಂದ ಅತ್ತ ಉದ್ಯೋಗವು ಇಲ್ಲ, ಇತ್ತಾ ಆಹಾರ ಭದ್ರತೆಯೂ ಇಲ್ಲದೆ ಶೋಚನೀಯ ಜೀವನವನ್ನು ನಡೆಸುತಿದ್ದಾರೆ ಎಂದು ಹೇಳಿದರು.

ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ತೀರಾ ಹಿಂದುಳಿದಿರುವ ಈ ಸಮುದಾಯದ ವಾಸ್ತವ ಸ್ಥಿತಿಯನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಡಾ|| ಸಿ.ಎಸ್ ದ್ವಾರಕನಾಥ್‍ರವರು ಸಲ್ಲಿಸಿರುವ ವರದಿಯಲ್ಲಿ ಪಿಂಜಾರ, ನದಾಫ್, ಮನ್ಸೂರಿ ಸಮುದಾಯದ ಜನರ ಅಭಿವೃದ್ಧಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆಯ ಅನಿವಾರ್ಯತೆ ಇದೆ ಎಂದು ತಿಳಿಸಿದ್ದಾರೆ. ಆದರೆ ರಾಜಕೀಯ ಪಕ್ಷಗಳು ನಮ್ಮನ್ನು ಚುನಾವಣೆಗಷ್ಟೇ ಮೀಸಲು ಮಾಡಿಕೊಂಡು ಗೆದ್ದ ನಂತರ ನೀಡಿದ ಭರವಸೆಯನ್ನು ಮರೆಯುತಿದ್ದಾರೆ. ಇನ್ನಾದರೂ ಕೂಡಲೇ ಪಿಂಜಾರ, ನದಾಫ್, ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕೆಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಸಿ.ಪಿ ಖಲಂದರ್ ಹಾಸಿಗೆ ಹೊಲಿಯುವ ವೃತ್ತಿಯು ನಮ್ಮ ಸಮುದಾಯದ ಪಾರಂಪರಿಕ ವೃತ್ತಿಯಾಗಿದ್ದು, ನಮ್ಮ ಉದ್ದಿಮೆಯನ್ನು ಗೃಹ ಕೈಗಾರಿಕೆ ಅಥವಾ ಸಣ್ಣ ಪ್ರಮಾಣದ ಉದ್ದಿಮೆ ಎಂದು ಪರಿಗಣಿಸಿ ಹಣಕಾಸು ಸಂಸ್ಥೆಗಳ ಮೂಲಕ ಪ್ರತ್ಯೇಕ ಸಾಲ, ಧನ ಸಹಾಯ, ನೀವೇಶನ ನೀಡಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಸಿ.ಕೆ ವಿನ್ನು, ದಾದಾ ಫೀರ್, ಸಿ.ಕೆ ಬುಡೇನ್, ಇಮಾಮ್ ಸಹೇಬ್, ಹುಸೇನ್ ನದಾಫ್, ಪಿ. ಗುಲ್ಜಾರ್ ಅಹಮ್ಮದ್, ಶಾನೂರ್ ನದಾಫ್ ಇದ್ದರು.